Six meditation techniques directly from Yoga Sutras - for beginners

Saturday, March 9, 2024

ಧ್ಯಾನಕ್ಕಾಗಿ ಉಪನಿಷತ್ತುಗಳಿಂದ ಎಂಟು ವಿದ್ಯೆಗಳು


ಧ್ಯಾನಕ್ಕಾಗಿ ಉಪನಿಷತ್ತುಗಳಿಂದ ಎಂಟು ವಿದ್ಯೆಗಳು

ಪರಿಚಯ

"ವಿದ್ಯಾ" ಎಂಬ ಪದವು "ವಿದ್" ಎಂಬ ಮೂಲದಿಂದ ಬಂದಿದೆ, ಇದು ಸಾಮಾನ್ಯ ಭಾಷೆಯಲ್ಲಿ ತಿಳುವಳಿಕೆಯನ್ನು ಸೂಚಿಸುತ್ತದೆ. 

ಆದರೆ, ವೈದಿಕ ಭಾಷೆಯಲ್ಲಿ "ವಿದ್ಯಾ" ಎಂಬುದು ಬರೇ ತಿಳುವಳಿಕೆ ಆಗಿರದೇ, "ಧ್ಯಾನದ ಮೂಲಕ ಪಡೆದ ಜ್ಞಾನ" ಎಂದಾಗುತ್ತದೆ. ಏಕೆಂದರೆ ಇದು ನಾವು ಯಾವುದೇ ವಿಷಯದ ಬಗ್ಗೆ ಧ್ಯಾನಿಸುವಾಗ ಆವಿಷ್ಕರಿಸುವ ಆನುಭಾವಿಕ ಸತ್ಯವಾಗಿರುತ್ತದೆ.

ಉಪನಿಷತ್ತುಗಳು ಧ್ಯಾನಿಸಲು ಸಾಧಕನಿಗಾಗಿ ಅನೇಕ ವಿಷಯಗಳನ್ನು ಪ್ರಸ್ತುತಪಡಿಸುತ್ತವೆ. ಈ ವಿಷಯಗಳನ್ನು "ವಿದ್ಯಾ" ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಉಪನಿಷತ್ತಿನ ಋಷಿಗಳ ಧ್ಯಾನದಲ್ಲಿ ಆವಿಷ್ಕಾರಗೊಂಡ ಆನುಭಾವಿಕ ಸತ್ಯವಾಗಿರುತ್ತದೆ. ವೈದಿಕ ಸಂಪ್ರದಾಯದಲ್ಲಿ, ಅಂತಹ ಮೂವತ್ತೆರಡು ವಿದ್ಯೆಗಳನ್ನು ಗುರುತಿಸಲಾಗಿದೆ ಮತ್ತು ಅವುಗಳು ಛಾಂದೋಗ್ಯ ಉಪನಿಷತ್, ಬೃಹದಾರಣ್ಯಕ ಉಪನಿಷತ್, ತೈತ್ತಿರೀಯ ಉಪನಿಷದ್ ಮತ್ತು ತಲವಕಾರ ಉಪನಿಷತ್ತುಗಳಲ್ಲಿ ಹರಡಿಕೊಂಡಿವೆ.

ಈ ಪರಿಚಯಾತ್ಮಕ ಸರಣಿಯಲ್ಲಿ ಅಂತಹ ಎಂಟು ವಿದ್ಯೆಗಳನ್ನು ನಿಮಗೆ ಪ್ರಸ್ತುತಪಡಿಸಲು ವೇದಿಕ್ ಟ್ರೈಬ್ ಗೆ ಸಂತೋಷವಾಗಿದೆ: (1) ಗಾಯತ್ರಿ ವಿದ್ಯೆ, (2) ಅಕ್ಷಿ ವಿದ್ಯೆ, (3) ಪುರುಷ ವಿದ್ಯೆ, (4) ಪ್ರಾಣಾಗ್ನಿಹೋತ್ರ ವಿದ್ಯೆ, (5) ಉದ್ಗೀತ ವಿದ್ಯೆ, (6) ಪಂಚಾಗ್ನಿ ವಿದ್ಯೆ, (7) ಆನಂದಮಯ ವಿದ್ಯೆ, ಮತ್ತು (8) ದಹರ ವಿದ್ಯೆ.

ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕುವುದು ನಮ್ಮ ಉದ್ದೇಶವಾಗಿದೆ, ಇದರಿಂದ ನೀವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತೀರಿ ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತೀರಿ ಎಂಬ ಆಶಯ ನಮಗಿದೆ.

ನಮ್ಮ ಮುಂದಿನ ಬರಹದಲ್ಲಿ ನಾವು ಧ್ಯಾನದ ಮೊದಲ ವಿಷಯವನ್ನು ಪ್ರಸ್ತುತಪಡಿಸುತ್ತೇವೆ: “ಗಾಯತ್ರಿ ವಿದ್ಯೆ".

ಮಧ್ವೇಶ ಕೆ
ವೇದಿಕ್ ಟ್ರೈಬ್

— 

1. ಗಾಯತ್ರಿ ವಿದ್ಯೆ

ಗಾಯತ್ರಿ ವಿದ್ಯೆಯಲ್ಲಿ, ಗಾಯತ್ರಿ ಮಂತ್ರದ ಅರ್ಥವನ್ನು ಧ್ಯಾನಿಸಲಾಗುತ್ತದೆ.

ಋಗ್ವೇದದ 3.62.10 ರಲ್ಲಿನ ಮಂತ್ರ:

ತತ್ಸವಿತುರ್ವರೇಣ್ಯಮ್ ।
ಭರ್ಗೋದೇವಸ್ಯ ಧೀಮಹಿ ।
ಧಿಯೋ ಯೋ ನ: ಪ್ರಚೋದಯಾತ್||

ಮೊದಲ ಸಾಲು "ಪರಬ್ರಹ್ಮನ" ಗುಣವನ್ನು ಸೂಚಿಸುತ್ತದೆ; ಎರಡನೆಯ ಸಾಲು ಇದನ್ನು ಧ್ಯಾನಿಸುವ ದೀಕ್ಷೆಯಾಗಿದೆ; ಮತ್ತು ಮೂರನೇ ಸಾಲಿನಲ್ಲಿ ನಮ್ಮ ಮನಸ್ಸನ್ನು ಅದರ ಹಾದಿಯಲ್ಲಿ ಪ್ರೇರೇಪಿಸುವಂತೆ ಕೋರಲಾಗಿದೆ.

ಪರಬ್ರಹ್ಮನ ಲಕ್ಷಣವೆಂದರೆ ಅದು ಇಡೀ ಸೃಷ್ಟಿಯನ್ನು ವ್ಯಾಪಿಸಿದೆ ಮತ್ತು ಹಾಗೆಯೇ ಮೀರಿಯೂ ಇದೆ. ವೈದಿಕ ವಾಂಗ್ಮಯವು ಪರಬೃಹ್ಮನ ಇಂತಹ ಇನ್ನೂ ಅನೇಕ ಲಕ್ಷಣಗಳನ್ನು ಪ್ರಸ್ತುತಪಡಿಸುತ್ತವೆ. ಇವು ಸಾಧಕರ ಧ್ಯಾನಕ್ಕೆ ಬೇಕಾದ ಸಾಮಗ್ರಿಗಳಾಗಿವೆ ಮತ್ತು ಸಾಧಕರು ಇದರಿಂದ ತಮ್ಮ ಮನಸ್ಸನ್ನು ಪರಬ್ರಹ್ಮನಲ್ಲಿ ಏಕಾಗ್ರಗೊಳಿಸಲು ಪ್ರಯತ್ನಿಸಬೇಕು.

ಈ ಸರಳ ಅರ್ಥದ ಹೊರತಾಗಿ ಗಾಯತ್ರಿ ಮಂತ್ರಕ್ಕೆ ಅನೇಕ ಇತರ ನಿಗೂಢ ಅರ್ಥಗಳೂ ಇವೆ. ಉದಾಹರಣೆಗೆ, ಮಂತ್ರದ ಮೂರು ಸಾಲುಗಳು ಪ್ರಜ್ಞೆಯ ಮೂರು ಸ್ಥಿತಿಗಳೊಂದಿಗೆ ಸಮೀಕರಣ ಮಾಡಲಾಗುತ್ತದೆ. ಹಾಗೆಯೇ ಪುರುಷ ಸೂಕ್ತದ ಮೂರು ವಿಭಾಗಗಳಿಗೆ, ವೈದಿಕ ಜ್ಞಾನವನ್ನು ಪ್ರಸ್ತುತಪಡಿಸುವ ಮೂರು ಪ್ರಕಾರಗಳಿಗೆ (ಪದ್ಯ, ಗದ್ಯ ಮತ್ತು ಸಂಗೀತ)... ಇತ್ಯಾದಿಯಾಗಿ ಸಮೀಕರಣ ಮಾಡಲಾಗುತ್ತದೆ.

ನೀವು ಆಧ್ಯಾತ್ಮಿಕ ಅಭ್ಯಾಸದಲ್ಲಿ ಆರಂಭಿಕರಾಗಿದ್ದಲ್ಲಿ, ನೀವು ಗಾಯತ್ರಿ ಮಂತ್ರದ ಸರಳ ಅರ್ಥವನ್ನು ಧ್ಯಾನಿಸುವ ಮೂಲಕ ಪ್ರಾರಂಭಿಸಬಹುದು ಮತ್ತು ಕ್ರಮೇಣ ಗಾಯತ್ರಿ ವಿದ್ಯೆಯ ಭಾಗವಾದ ನಿಗೂಢ ಅರ್ಥಗಳನ್ನೂ ತಿಳಿದು ಧ್ಯಾನಿಸಬಹುದು.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ಎರಡನೆಯ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ "ಅಕ್ಷಿ ವಿದ್ಯೆ".

ಮಧ್ವೇಶ ಕೆ
ವೇದಿಕ್ ಟ್ರೈಬ್

— 

2. ಅಕ್ಷಿ ವಿದ್ಯೆ

ಅಕ್ಷಿ ವಿದ್ಯೆಯಲ್ಲಿ ಕಣ್ಣುಗಳಿಂದ ದೊರೆಯುವ ಆನುಭಾವಿಕ ಸತ್ಯವನ್ನು ಧ್ಯಾನಿಸಲಾಗುತ್ತದೆ.

ಅಕ್ಷಿ ವಿದ್ಯೆಯನ್ನು ಮೂರು ದೃಷ್ಟಿಕೋನಗಳಿಂದ ಅರ್ಥೈಸಿಕೊಳ್ಳಬಹುದು: ಆದಿಭೌತಿಕ, ಆದಿದೈವಿಕ ಮತ್ತು ಆಧ್ಯಾತ್ಮಿಕ.

ನಮ್ಮ ಕಣ್ಣುಗಳನ್ನು ಮುಚ್ಚಿದಾಗ, ನಾವು ಸಾಮಾನ್ಯವಾಗಿ, ಚಲಿಸುವ ಮೋಡಗಳಂತೆ, ಬೆಳಕಿನ ಚುಕ್ಕೆಗಳಂತೆ, ಬಿಳಿ ಹೊಳಪುಗಳು, ಹಿಮ ಇತ್ಯಾದಿಗಳನ್ನು ವೀಕ್ಷಿಸುತ್ತೇವೆ. ಇದು ಸಾಮಾನ್ಯವಾಗಿ "ಫಾಸ್ಫೇನ್ಸ್" ಎಂದು ಕರೆಯಲ್ಪಡುವ ನರವೈಜ್ಞಾನಿಕ ಚಟುವಟಿಕೆಯಾಗಿದೆ. ಧ್ಯಾನದ ಆರಂಭದಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಇದನ್ನು ಬಳಸಬಹುದು ಮತ್ತು ಇದು ಅಕ್ಷಿ ವಿದ್ಯೆಯ ಆದಿಭೌತಿಕ ದೃಷ್ಟಿಕೋನವಾಗಿದೆ.

ವೈದಿಕ ಸಂಪ್ರದಾಯದಲ್ಲಿ, ಕಣ್ಣು ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಮತ್ತು ಇದಕ್ಕೆ ಅನೇಕ ಅಭಿಮಾನಿ ದೇವತೆಗಳಿದ್ದಾರೆ (ಉದಾ. ಸೂರ್ಯ, ಚಂದ್ರ, ಇಂದ್ರ, ಶಚಿ ಇತ್ಯಾದಿ). ಇವರಲ್ಲಿ, ಸೂರ್ಯ ಪ್ರಧಾನ ದೇವತೆ ಮತ್ತು ಇವನ ಪ್ರೀತಿಗಾಗಿ ಋಗ್ವೇದದ "ಸೂರ್ಯ-ಸೂಕ್ತ", ವಾಲ್ಮೀಕಿ ರಾಮಾಯಣದ "ಆದಿತ್ಯಹೃದಯಂ" ಅಥವಾ ಸೂರ್ಯನಿಗೆ ಮೀಸಲಾದ ಇತರ ಸ್ತೋತ್ರಗಳನ್ನು ಧ್ಯಾನಿಸಬಹುದು. ಹಾಗೆಯೇ ಕಣ್ಣುಗಳಿಗೆ ಸಂಬಂಧಿಸಿದ ಇತರ ದೇವತೆಗಳಿಗೆ ಸಮರ್ಪಿತವಾದ ಸೂಕ್ತಗಳು ಅಥವಾ ಶ್ಲೋಕಗಳನ್ನು ಸಹ ಧ್ಯಾನಿಸಬಹುದು. ಇದು ಅಕ್ಷಿ ವಿದ್ಯೆಯ ಅಧಿದೈವಿಕ ದೃಷ್ಟಿಕೋನವಾಗಿದೆ.

ಮಾಂಡೂಕ್ಯ ಉಪನಿಷತ್ತಿನಲ್ಲಿ, ಕಣ್ಣುಗಳಲ್ಲಿ ಇರುವ ಪರಬ್ರಹ್ಮನನ್ನು "ವಿಶ್ವ" ಎಂದು ಕರೆಯಲಾಗುತ್ತದೆ. ಪರಬ್ರಹ್ಮನ ಈ ಅಂಶವನ್ನು ಧ್ಯಾನಿಸುವುದು ಅಕ್ಷಿ ವಿದ್ಯೆಯ ಆಧ್ಯಾತ್ಮಿಕ ದೃಷ್ಟಿಕೋನವಾಗಿದೆ.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ಮೂರನೇ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ "ಪುರುಷ ವಿದ್ಯೆ".

ಮಧ್ವೇಶ ಕೆ
ವೇದಿಕ್ ಟ್ರೈಬ್

—- 

3. ಪುರುಷ ವಿದ್ಯೆ

ಪುರುಷ ವಿದ್ಯೆಯಲ್ಲಿ, ಮಾನವನ ಜೀವಿತಾವಧಿಗೆ ಅಧಿಪತಿಯಾಗಿರುವ ದೇವತೆಗಳನ್ನು ಧ್ಯಾನಿಸಲಾಗುತ್ತದೆ.

ಜೀವನದ ಮೊದಲ 24 ವರ್ಷಗಳು "ವಸು" ದೇವತಾಗಣದ ಅಧೀನವಾಗಿರುತ್ತದೆ; ಮುಂದಿನ 44 ವರ್ಷಗಳು "ರುದ್ರ" ದೇವತಾಗಣದ ಹಾಗೇ ಮುಂದಿನ 48 ವರ್ಷಗಳು "ಆದಿತ್ಯ" ದೇವತಾಗಣದ ಅಧೀನವಾಗಿರುತ್ತದೆ. ಆದ್ದರಿಂದ, ವೈದಿಕ ಪರಿಭಾಷೆಯಲ್ಲಿ, ಆರೋಗ್ಯಕರ ಜೀವನವನ್ನು 116 ವರ್ಷಗಳು ಎಂದು ಗ್ರಹಿಸಲಾಗುತ್ತದೆ. "ಪುರುಷ ವಿದ್ಯೆ" ಎಂದರೆ ಅಂತಹ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಕರುಣಿಸುವ ಈ ದೇವತೆಗಳನ್ನು ಧ್ಯಾನಿಸುವುದು.

"ವಸು" ದೇವತಾಗಣ 8 ದೇವತೆಗಳನ್ನು ಒಳಗೊಂಡಿದೆ ಮತ್ತು ಅವರು ಗಾಯತ್ರಿ ಛಂದಸ್ಸಿನ ಪ್ರತಿ ಸಾಲಿನ 8 ಅಕ್ಷರಗಳನ್ನು ಪ್ರತಿನಿಧಿಸುತ್ತಾರೆ. (8 ಅಕ್ಷರಗಳು X 3 ಸಾಲುಗಳು = 24 ಅಕ್ಷರಗಳು). ಆದ್ದರಿಂದ ಅವರು ನಮ್ಮ ಜೀವನದ ಮೊದಲ 24 ವರ್ಷಗಳನ್ನು ನಿರ್ವಹಿಸುತ್ತಾರೆ. 

"ರುದ್ರ" ದೇವತಾಗಣ 11 ದೇವತೆಗಳನ್ನು ಒಳಗೊಂಡಿದೆ ಮತ್ತು ಅವರು ತ್ರಿಷ್ಟುಪ್ ಛಂದಸ್ಸಿನ ಪ್ರತಿ ಸಾಲಿನ 11 ಅಕ್ಷರಗಳನ್ನು ಪ್ರತಿನಿಧಿಸುತ್ತಾರೆ. (11 ಅಕ್ಷರಗಳು X 4 ಸಾಲುಗಳು = 44 ಅಕ್ಷರಗಳು). ಆದ್ದರಿಂದ ಅವರು ನಮ್ಮ ಜೀವನದ ಮುಂದಿನ 44 ವರ್ಷಗಳನ್ನು ನಿರ್ವಹಿಸುತ್ತಾರೆ. 

"ಆದಿತ್ಯ" ದೇವತಾಗಣ 12 ದೇವತೆಗಳನ್ನು ಒಳಗೊಂಡಿದೆ ಮತ್ತು ಅವರು ಜಗತಿ ಛಂದಸ್ಸಿನ ಪ್ರತಿ ಸಾಲಿನ 12 ಅಕ್ಷರಗಳನ್ನು ಪ್ರತಿನಿಧಿಸುತ್ತಾರೆ. (12 ಅಕ್ಷರಗಳು X 4 ಸಾಲುಗಳು = 48 ಅಕ್ಷರಗಳು). ಆದ್ದರಿಂದ ಅವರು ನಮ್ಮ ಜೀವನದ ಮುಂದಿನ 48 ವರ್ಷಗಳನ್ನು ನಿರ್ವಹಿಸುತ್ತಾರೆ.

ನೀವು ಯಾವಾಗಲೂ ಹೇಗೆ ವಿವಿಧ ಮಂತ್ರಗಳನ್ನು ಧ್ಯಾನಿಸಬಹುದೋ ಹಾಗೆಯೇ ನಿಮ್ಮ ವಯಸ್ಸಿಗೆ ಅನುಗುಣವಾಗಿ ಮತ್ತು ಪುರುಷ ವಿದ್ಯೆಯ ಪ್ರಕಾರ ಕೆಲವು ಮಂತ್ರಗಳ ಮೇಲೆ ಏಕಾಗ್ರತೆ ವಹಿಸಬಹುದು. ಉದಾಹರಣೆಗೆ, ಗಾಯತ್ರಿ ಛಂದಸ್ಸಿನಲ್ಲಿರುವ ಋಗ್ವೇದದ ಗಾಯತ್ರಿ ಮಂತ್ರ (3.62.0), ಅಥವಾ ತ್ರಿಷ್ಟುಪ್ ಛಂದಸ್ಸಿನಲ್ಲಿರುವ ಹಿರಣ್ಯ ಗರ್ಭ ಸೂಕ್ತ (10.121), ಅಥವಾ ಹೆಚ್ಚಿನ ಭಾಗ ಜಗತಿ ಛಂದಸ್ಸನ್ನು ಹೊಂದಿರುವ ಬ್ರಾಹ್ಮಣಸ್ಪತಿ ಸೂಕ್ತ (2.23). ಈ ನಿರ್ದಿಷ್ಟ ಅಭ್ಯಾಸವು ಪುರುಷ ವಿದ್ಯೆಯಲ್ಲಿ ಪ್ರಮುಖವಾಗಿದೆ.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ನಾಲ್ಕನೇ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ "ಪಂಚಾಗ್ನಿಹೋತ್ರ ವಿದ್ಯೆ".

ಮಧ್ವೇಶ ಕೆ
ವೇದಿಕ್ ಟ್ರೈಬ್

— 

4. ಪ್ರಾಣಾಗ್ನಿಹೋತ್ರ ವಿದ್ಯೆ

ಆದಿಭೌತಿಕವಾಗಿ "ಪ್ರಾಣ" ಎಂದರೆ ಇಂದ್ರಿಯಗಳ ಏಕದೇಶೀಯ ಅನುಭವ ಮತ್ತು ಜೀವಂತತೆಯ ಸ್ಥಿತಿ (ಹೋಮಿಯೋಸ್ಟಾಸಿಸ್) ಎಂದಾಗುತ್ತದೆ. 

ದೈವೀ ತತ್ವಗಳಲ್ಲಿ, ಪ್ರಾಣ ತತ್ವವು ಸೃಷ್ಟಿಯಲ್ಲಿನ ಅತ್ಯುನ್ನತ ಜೀವವಾಗಿದ್ದು, ಇತರ ಎಲ್ಲಾ ಜೀವರ ಚಟುವಟಿಕೆಗೆ ಕಾರಣವಾಗಿದೆ.

"ಅಗ್ನಿಹೋತ್ರ" ಎಂಬುದು ಪವಿತ್ರವಾದ ಅಗ್ನಿಯಲ್ಲಿ ತುಪ್ಪ, ಹಾಲು ಅಥವಾ ಇತರ ವಸ್ತುಗಳನ್ನು ಅರ್ಪಿಸುವ ದೈನಂದಿನ (ಬಾಹ್ಯ) ಆಚರಣೆಯಾಗಿದೆ. ಹಾಗೆಯೇ "ಪ್ರಾಣಾಗ್ನಿಹೋತ್ರ" ಎಂಬುದು ಜಠರಾಗ್ನಿಯಲ್ಲಿ ಆಹಾರವನ್ನು ನೈವೇದ್ಯವಾಗಿ ಅರ್ಪಿಸುವ ದೈನಂದಿನ (ಆಂತರಿಕ) ಆಚರಣೆಯಾಗಿದೆ. ಇಲ್ಲಿ ನಮ್ಮ ದೇಹದಲ್ಲಿ ಇರುವ ಪ್ರಾಣದ ಐದು ರೂಪಗಳಿಗೆ ಅರ್ಪಣೆ ಮಾಡಲಾಗುತ್ತದೆ.

ಪ್ರಾಣದ ಐದು ರೂಪಗಳೆಂದರೆ: 1. ಜೀವಂತಿಕೆಯನ್ನು ನಿರ್ವಹಿಸುವ "ಮುಖ್ಯ ಪ್ರಾಣ"; 2. ಶಕ್ತಿಗಳ ಕೆಳಮುಖ ಚಲನೆಯನ್ನು ನಿಯಂತ್ರಿಸುವ "ಅಪಾನ"; 3. ಶಕ್ತಿಗಳ ಮೇಲ್ಮುಖ ಚಲನೆಯನ್ನು ನಿಯಂತ್ರಿಸುವ "ಉದಾನ"; 4. ಶಕ್ತಿಯ ಸಮಾನ ಹಂಚಿಕೆಯನ್ನು ನಿರ್ವಹಿಸುವ "ಸಮಾನ"; 5. ಪ್ರಮುಖ ಅಂಗಗಳನ್ನು, ವಿಶೇಷವಾಗಿ ಹೃದಯವನ್ನು ನಿರ್ವಹಿಸುವ "ವ್ಯಾನ".

ಆಹಾರ ಸೇವನೆಯ ಪ್ರಾರಂಭದಲ್ಲಿ, "ಪ್ರಾಣಾಯ-ಸ್ವಾಹಾ, ಅಪಾನಯ-ಸ್ವಾಹಾ, ಉದಾನಾಯ-ಸ್ವಾಹಾ, ಸಮಾನಾಯ-ಸ್ವಾಹಾ ಮತ್ತು ವ್ಯಾಯನಯ-ಸ್ವಾಹಾ" ಎಂದು ಜಪಿಸುವ ಮೂಲಕ ಐದು ಸಣ್ಣ ತುತ್ತುಗಳನ್ನು ಸೇವಿಸಲಾಗುತ್ತದೆ. ಅಂತಿಮವಾಗಿ ಎಲ್ಲಾ ಸಾರವನ್ನು ಸ್ವೀಕರಿಸುವುದು ಪರಬ್ರಹ್ಮ ತತ್ವವು ಎಂದು ಸೂಚಿಸಲು "ಬ್ರಹ್ಮಣೆ-ಸ್ವಾಹಾ" ಎಂದು ಜಪಿಸುವುದರ ಮೂಲಕ ಇನ್ನೂ ಒಂದು ಸಣ್ಣ ತುತ್ತನ್ನು ಸೇವಿಸಲಾಗುತ್ತದೆ. ವೈದಿಕ ಸಂಪ್ರದಾಯದ ಪ್ರಕಾರ ದೀಕ್ಷೆ ಪಡೆಯುವ ಮೂಲಕ ಮತ್ತು ಗುರುವಿನಿಂದ ಸೂಕ್ತವಾಗಿ ಮಾರ್ಗದರ್ಶನ ಪಡೆಯುವ ಮೂಲಕ ನೀವು ಈ "ಪ್ರಾಣಾಗ್ನಿಹೋತ್ರ ವಿದ್ಯೆಯನ್ನು" ಅಭ್ಯಾಸ ಮಾಡಬಹುದು.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ಐದನೇ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ
 "ಉದ್ಗೀಥ ವಿದ್ಯೆ"

ಮಧ್ವೇಶ ಕೆ
ವೇದಿಕ್ ಟ್ರೈಬ್

— 

5. ಉದ್ಗೀಥ ವಿದ್ಯೆ

ಯಜ್ಞ ಆಚರಣೆಯಲ್ಲಿ, "ಉದ್ಗಾತೃ" ಸಾಮವೇದ ಮಂತ್ರಗಳನ್ನು ಹಾಡುವರು.

ದೈವೀ ತತ್ವಗಳಲ್ಲಿ, ಪ್ರಾಣ ತತ್ವವು ಸೃಷ್ಟಿಯಲ್ಲಿನ ಅತ್ಯುನ್ನತ ಜೀವವಾಗಿದೆ ಮತ್ತು ನಮ್ಮ ಉಸಿರಾಟಕ್ಕೆ ಕಾರಣವಾಗಿದೆ. ನಮ್ಮ ಉಸಿರಾಟವನ್ನು ಪರಬ್ರಹ್ಮನ ಸ್ತುತಿಯಾಗಿ ಹಾಡುವಂತೆ ಮಾಡುವುದರಿಂದ ಉಪನಿಷತ್ತುಗಳಲ್ಲಿ ಅವನನ್ನು "ಉದ್ಗೀಥ" ಎಂದೂ ಕರೆಯುತ್ತಾರೆ.

"ವಾಕ್" (ಭಾರತಿ) ಪ್ರಾಣನ ಪತ್ನಿ ಮತ್ತು ಅವಳು ನಮ್ಮ ಮಾತಿಗೆ ಅಭಿಮಾನಿನಿ. ಅವಳು ನಮ್ಮ ಮಾತನ್ನು ದೇವತೆಗಳು, ಮಾನವರು ಮತ್ತು ಪಿತೃಗಳಲ್ಲಿ ಇರುವ ಪರಬ್ರಹ್ಮಕ್ಕೆ ಅರ್ಪಿಸುತ್ತಾಳೆ. "ಉದ್ಗೀಥ ವಿದ್ಯೆಯಲ್ಲಿ, ಅವಳನ್ನು ಹಸುವಿನಂತೆ ಕಲ್ಪಿಸಲಾಗಿದೆ ಮತ್ತು ಅವಳ ನಾಲ್ಕು ಕಾಲುಗಳು ನಾಲ್ಕು ಸಮರ್ಪಣೆಯ ಉಚ್ಛಾರವಾಗಿವೆ (ದೇವತೆಗಳಿಗೆ ಎರಡು ಉಚ್ಛಾರಣೆಗಳು ಮತ್ತು ಮಾನವರು ಮತ್ತು ಪಿತೃಗಳಿಗೆ ತಲಾ ಒಂದು ಉಚ್ಛಾರಣೆ).  

ಹಾಗೆಯೇ ವಾಕ್ಕನ್ನು ನಾಲ್ಕು ಹಂತಗಳಾಗಿ ವರ್ಗೀಕರಿಸಬಹುದು: "ಪರಾ, ಪಶ್ಯಂತಿ, ಮಧ್ಯಮ, ವೈಖರಿ". "ಪರಾ" ಎಂಬುದು ಸುಪ್ತ ಪ್ರಜ್ಞೆಯ ಮಟ್ಟದಲ್ಲಿನ ಸೂಕ್ಷ್ಮವಾದ ಮಾತು; "ಪಶ್ಯಂತಿ" ಎಂಬುದು ಜಾಗೃತ ಪ್ರಜ್ಞೆಯ ಮಟ್ಟಕ್ಕೆ ಏರಿದ ಆದರೆ ಯಾವುದೇ ಪದಗಳನ್ನು ನಿಯೋಜಿಸಲಾಗಿಲ್ಲದ ಮಾತು; “ಮಧ್ಯಮ” ಎಂಬುದು ಪದಗಳಲ್ಲಿ ರಚನೆಯಾಗಿರುವ ಆದರೆ ಇನ್ನೂ ಉಚ್ಚರಿಸಲಾಗಿಲ್ಲದ ಮಾತು; ಮತ್ತು "ವೈಖರಿ" ಎಂಬುದು ಉಚ್ಛಾರಣೆ ಆದ ಮಾತು. "ವಾಕ್" ಈ ನಾಲ್ಕು ಹಂತದ ಮಾತನ್ನೂ ನಿಯಂತ್ರಿಸುತ್ತಾಳೆ.

ಆದ್ದರಿಂದ ಉದ್ಗೀಥ ವಿದ್ಯೆಯಲ್ಲಿ, ನಾವು ನಮ್ಮ ಮಾತಿನ ಎಲ್ಲಾ ನಾಲ್ಕು ಹಂತಗಳನ್ನು "ಸ್ವಾಹಾ / ವಸತ್" ಉಚ್ಛಾರಣೆಯಿಂದ ದೇವತೆಗಳಿಗೆ ಅರ್ಪಿಸುತ್ತೇವೆ, "ಹಂತ" ಉಚ್ಛಾರಣೆಯಿಂದ ಮನುಷ್ಯರಿಗೆ ಮತ್ತು "ಸ್ವಧಾ" ಉಚ್ಛಾರಣೆಯಿಂದ ಪಿತೃಗಳಿಗೆ ಅರ್ಪಿಸುತ್ತೇವೆ. ವೈದಿಕ ಸಂಪ್ರದಾಯದ ಪ್ರಕಾರ ದೀಕ್ಷೆ ಪಡೆಯುವ ಮೂಲಕ ಮತ್ತು ಗುರುವಿನಿಂದ ಸೂಕ್ತವಾಗಿ ಮಾರ್ಗದರ್ಶನ ಪಡೆಯುವ ಮೂಲಕ ನೀವು ಈ ಉದ್ಗೀಥ ವಿದ್ಯೆಯನ್ನು ಅಭ್ಯಾಸ ಮಾಡಬಹುದು.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ಆರನೇ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ
 "ಪಂಚಾಗ್ನಿ ವಿದ್ಯೆ"

ಮಧ್ವೇಶ ಕೆ
ವೇದಿಕ್ ಟ್ರೈಬ್

— 

6. ಪಂಚಾಗ್ನಿ ವಿದ್ಯೆ

ವೈದಿಕ ಸಂಪ್ರದಾಯದಲ್ಲಿ, "ಶ್ರೌತ" ಆಚರಣೆಯ ಭಾಗವಾಗಿರುವ "ತ್ರೇತಾಗ್ನಿ" (ಮೂರು ಪವಿತ್ರ ಅಗ್ನಿ) ಎಂದರೆ ಗಾರ್ಹಪತ್ಯ-ಅಗ್ನಿ, ಆವಾಹನೀಯ-ಅಗ್ನಿ ಮತ್ತು ದಕ್ಷಿಣ-ಅಗ್ನಿ. ಉಪನಿಷತ್ತುಗಳಲ್ಲಿ, "ಪಂಚಾಗ್ನಿ" ವಿದ್ಯೆಗಾಗಿ ಇನ್ನೂ ಎರಡು ಅಗ್ನಿಗಳನ್ನು ಸೇರಿಸಲಾಗುತ್ತದೆ: ಪುರುಷ (ಸಂತಾನೋತ್ಪತ್ತಿಗಾಗಿ ವೀರ್ಯವನ್ನು ಒದಗಿಸುವವನು) ಮತ್ತು ಮಹಿಳೆ (ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವವಳು). 

ವೈದಿಕ ಸಂಪ್ರದಾಯವು ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು "ವಾಮ-ಯಜ್ಞ" ಎಂದು ಪರಿಗಣಿಸುತ್ತದೆ ಮತ್ತು ಪುರುಷನನ್ನು ಮತ್ತು ಮಹಿಳೆಯನ್ನು - ಎರಡು ಅಗ್ನಿಗಳು ಎಂದು ರೂಪಕವಾಗಿ ಕಾಣುತ್ತದೆ. ಪುರುಷನು ತಿನ್ನುವ ಆಹಾರವು ಸಂತಾನೋತ್ಪಗೆ ವೀರ್ಯವನ್ನು ಒದಗಿಸುವ ಹವಿಸ್ಸಾಗಿದೆ ಮತ್ತು ಮಹಿಳೆ ತಿನ್ನುವ ಆಹಾರವು ಸಂತಾನವನ್ನು ಉಳಿಸಿಕೊಳ್ಳುವ ಮತ್ತು ಪೂರ್ಣಗೊಳಿಸುವ ಹವಿಸ್ಸಾಗಿದೆ.

ರೂಪಕವಾಗಿ ಹೇಳಲಾದ ಎರಡು ಅಗ್ನಿಗಳ ಜೊತೆಗೆ, ಇನ್ನೂ ಮೂರು ನಿಜವಾದ ಅಗ್ನಿಗಳು ಪಂಚಾಗ್ನಿಹೋತ್ರ ವಿದ್ಯೆಯ ಭಾಗವಾಗಿದೆ: ಗಾರ್ಹಪತ್ಯ-ಅಗ್ನಿ, ಆವಾಹನೀಯ-ಅಗ್ನಿ ಮತ್ತು ದಕ್ಷಿಣ-ಅಗ್ನಿ.

ಮದುವೆಯ ಸಮಯದಲ್ಲಿ ಗಾರ್ಹಪತ್ಯ-ಅಗ್ನಿಯನ್ನು ಬೆಳಗಿಸಲಾಗುತ್ತದೆ ಮತ್ತು "ಅಗ್ನಿ-ಹೋತ್ರ" ಎಂಬ ಆಚರಣೆಯ ಭಾಗವಾಗಿ ನಿರಂತರವಾಗಿ ಪರಿಚರ್ಯೆ ಮಾಡಲಾಗುತ್ತದೆ. ಇದು ಇತರ ಎರಡು ಅಗ್ನಿಗಳಿಗೆ ಮೂಲವಾಗುತ್ತದೆ. ಮನೆಯ ಯಜಮಾನನ ಮರಣದ ನಂತರ, ಅದೇ ಅಗ್ನಿಯನ್ನು ಅಂತ್ಯಕ್ರಿಯೆಯಲ್ಲಿ ಚಿತೆಯನ್ನು ಬೆಳಗಿಸಲು ಬಳಸಲಾಗುತ್ತದೆ.

"ಶ್ರೌತ ಯಜ್ಞ" ಆಚರಣೆಗಳಲ್ಲಿ ದೇವತೆಗಳಿಗೆ ಆಹುತಿ ನೀಡಲು ವಿಶೇಷ ಸಂದರ್ಭಗಳಲ್ಲಿ ಮಾತ್ರ ಆವಾಹನೀಯ-ಅಗ್ನಿಯನ್ನು ಗಾರ್ಹಪತ್ಯ-ಅಗ್ನಿಯಿಂದ ಉರಿಸಲಾಗುತ್ತದೆ.

ಹಾಗೆಯೇ, "ಶ್ರೌತ ಯಜ್ಞ" ಆಚರಣೆಗಳಲ್ಲಿ ಪಿತೃಗಳಿಗೆ ನೈವೇದ್ಯಗಳನ್ನು ಮಾಡಲು ವಿಶೇಷ ಸಂದರ್ಭಗಳಲ್ಲಿ ಮಾತ್ರ ಆವಾಹನೀಯ-ಅಗ್ನಿಯಿಂದ ದಕ್ಷಿಣ-ಅಗ್ನಿಯನ್ನು ಉರಿಸಲಾಗುತ್ತದೆ.

ವೈದಿಕ ಸಂಪ್ರದಾಯದ ಪ್ರಕಾರ ದೀಕ್ಷೆ ಪಡೆಯುವ ಮೂಲಕ ಮತ್ತು "ಗುರುಗಳಿಂದ" ಸೂಕ್ತವಾಗಿ ಮಾರ್ಗದರ್ಶನ ಪಡೆಯುವ ಮೂಲಕ ನೀವು ಈ ಪಂಚಾಗ್ನಿ ವಿದ್ಯೆನ್ನು ಧ್ಯಾನಿಸಬಹುದು.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ಏಳನೇ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ
 "ಆನಂದಮಯ ವಿದ್ಯೆ"

ಮಧ್ವೇಶ ಕೆ
ವೇದಿಕ್ ಟ್ರೈಬ್

— 

7. ಆನಂದಮಯ ವಿದ್ಯೆ

ಸಾಮಾನ್ಯ ಭಾಷೆಯಲ್ಲಿ, ವೈದಿಕ ಸಾಹಿತ್ಯವನ್ನು "ಕರ್ಮ ಕಾಂಡ" ಮತ್ತು "ಜ್ಞಾನ ಕಾಂಡ" ಎಂದು ವಿಂಗಡಿಸಲಾಗಿದೆ. ಆದಾಗ್ಯೂ, ಇವುಗಳ ಜೊತೆಗೆ ಇನ್ನೊಂದು ವಿಭಾಗವೂ ಇದೆ "ಉಪಾಸನಾ ಕಾಂಡ" (ಇದರ ಬಗೆಗಿನ ಜ್ಞಾನವನ್ನು ನಾವು ಇಂದು ಬಹುತೇಕ ಕಳೆದುಕೊಂಡಿದ್ದೇವೆ).

ಕರ್ಮ-ಕಾಂಡವು "ಕರ್ಮ ಮೀಮಾಂಸಾ" (ವೈದಿಕ ಆಚರಣೆಗಳ ಕುರಿತಾದ ಚಿಂತನೆ) ಆಗಿದೆ, ಉಪಾಸನಾ-ಕಾಂಡವು "ದೈವೀ ಮೀಮಾಂಸಾ" (ದೇವತೆಗಳ ಕುರಿತು ಚಿಂತನೆ) ಆಗಿದೆ ಮತ್ತು ಜ್ಞಾನ-ಕಾಂಡವು "ಬ್ರಹ್ಮ ಮೀಮಾಂಸಾ" (ಪರಬೃಹ್ಮದ ಚಿಂತನೆ) ಆಗಿದೆ.

ದೈವೀ ಮೀಮಾಂಸೆಯಲ್ಲಿ, ದೇವತೆಗಳ ತಾರತಮ್ಯ, ಅವರ ಸೂಕ್ಷ್ಮ ಸ್ವಭಾವ, ಅವರನ್ನು ಪೂಜಿಸುವ ವಿಧಾನ, ಭೌತಿಕ ಆಯಾಮದಲ್ಲಿ ಅವರ ರೂಪ ... ಇತ್ಯಾದಿ ಪ್ರಮೇಯಗಳನ್ನು ಚಿಂತಿಸಲಾಗುತ್ತದೆ.

ಉಪನಿಷತ್ತುಗಳಲ್ಲಿನ "ಆನಂದಮಯ ವಿದ್ಯೆಯು" ದೈವೀ ಮೀಮಾಂಸೆಯ ಒಂದು ಅಂಶವನ್ನು ಹೇಳುತ್ತದೆ - ಅಂದರೆ ದೇವತೆಗಳ ತಾರತಮ್ಯ. 

ಆದ್ದರಿಂದ, "ಆನಂದ ವಿದ್ಯೆ" ಎಂದರೆ ದೇವತೆಗಳ ತಾರತಮ್ಯದ ಪ್ರಕಾರ ಅವರ ಸ್ವರೂಪಭೂತವಾದ ಆನಂದ ಇದೆ ಎಂದು ತಿಳಿಯುವುದು ಮತ್ತು ಇದರ ಅನುಗುಣವಾಗಿ ಅವರನ್ನು ಉಪಾಸಿಸುವುದು. ಈ ರೀತಿಯ ಉಪಾಸನೆಯನ್ನು "ದೇವತಾ ತಾರತಮ್ಯ ಉಪಾಸನೆ" ಎಂದು ಕರೆಯಲಾಗುತ್ತದೆ ಮತ್ತು ಇದು "ಪಂಚರಾತ್ರ" ಸಂಪ್ರದಾಯದ ಭಾಗವಾಗಿದೆ. ಈ ಸಂಪ್ರದಾಯವು ಇಂದಿಗೂ ತತ್ವವಾದದ ಅನುಯಾಯಿಗಳಲ್ಲಿ ಮುಂದುವರೆದಿದೆ.

ಹೆಚ್ಚಿನ ಮಾಹಿತಿಗಾಗಿ ನೀವು ಶ್ರೀ ಜಗನ್ನಾಥದಾಸರ "ಹರಿಕಥಾಮೃತಸಾರ"ದ "ಕಕ್ಷ ತಾರತಮ್ಯ ಸಂಧಿ"ಯನ್ನು ಓದಬಹುದು.

ನಮ್ಮ ಮುಂದಿನ ಬರಹದಲ್ಲಿ, ನಾವು ಧ್ಯಾನಿಸಬೇಕಾದ ಎಂಟನೇ ವಿಷಯವನ್ನು ಪ್ರಸ್ತುತಪಡಿಸುತ್ತೇವೆ; ಅಂದರೆ
 "ದಹರ ವಿದ್ಯೆ"

ಮಧ್ವೇಶ ಕೆ
ವೇದಿಕ್ ಟ್ರೈಬ್

— 

8. ದಹರ ವಿದ್ಯೆ

"ಓಂ" ಅನ್ನು "ಪ್ರಣವ" ಮತ್ತು "ಭೂಃ, ಭುವಃ, ಸುವಃ" ಅನ್ನು "ವ್ಯಾಹೃತಿ" ("ಓಂ" ನ ವಿಸ್ತರಣೆ) ಎಂದು ಕರೆಯಲಾಗುತ್ತದೆ.

ಭೌತಿಕ ಆಯಾಮದಲ್ಲಿ, "ಭೂಃ" ಎಂದರೆ ಭೂಮಿ, "ಭುವಃ" ಎಂದರೆ ಆಕಾಶ ಮತ್ತು "ಸುವಃ" ಎಂದರೆ ಅಂತಿರಿಕ್ಷ. 

ಅಂತರಿಕ್ಷವು ಭೂಮಿ ಮತ್ತು ಆಕಾಶ ಎರಡನ್ನೂ ಒಳಗೊಂಡಿದೆ. "ಅಗ್ನಿ" ಭೂಸ್ಥಾನೀಯ ದೇವತೆ, "ವಾಯು" ಆಕಾಶಕ್ಕೆ ದೇವತೆ ಮತ್ತು "ಬ್ರಹ್ಮಣಸ್ಪತಿ" ಅಂತರಿಕ್ಷದ ದೇವತೆ. ಅವರು ಭೂಃ, ಭುವಃ, ಸುವಃ ಎಂಬ ವ್ಯಾಹೃತಿಗಳನ್ನೂ ಸಹ ಪ್ರತಿನಿಧಿಸುತ್ತಾರೆ

"ದಹರ ವಿದ್ಯೆ" ಯಲ್ಲಿ ನಮ್ಮ ಹೃದಯವು "ದಹರಾಕಾಶ" ಎಂಬ ಆಂತರಿಕ ಆಕಾಶವನ್ನು ಹೊಂದಿದೆ ಎಂದು ಕಲ್ಪಿಸಲಾಗಿದೆ. ಈ ದಹರಾಕಾಶದಲ್ಲಿ ವಾಯು ಮತ್ತು ಅಗ್ನಿ ಈ ಇಬ್ಬರು ದೇವತೆಗಳೂ ಇದ್ದಾರೆ ಎಂದು ಉಪನಿಷತ್ತು ಹೇಳುತ್ತದೆ. ಅವರನ್ನು "ಭೂಃ, ಭುವಃ" ಎಂಬ ವ್ಯಾಹೃತಿಗಳ ಮೂಲಕ ಉಪಾಸಿಸಲಾಗುತ್ತದೆ ಮತ್ತು ಬ್ರಹ್ಮಣಸ್ಪತಿಯನ್ನು "ಸುವಃ" ಎಂಬ ವ್ಯಾಹೃತಿಯ ಮೂಲಕ ಉಪಾಸಿಸಲಾಗುತ್ತದೆ. ಅಂತಿಮವಾಗಿ, ಈ ದೇವತೆಗಳ ಮೂಲಕ, ನಮ್ಮ ಹೃದಯದಲ್ಲಿರುವ ಪರಬ್ರಹ್ಮವನ್ನು ಉಪಾಸಿಸಲಾಗುತ್ತದೆ.

ನಿಮ್ಮ ದಹರಾಕಾಶದಲ್ಲಿ ಈ ದೇವತೆಗಳನ್ನು ಮತ್ತು ಪರಬ್ರಹ್ಮವನ್ನು ಧ್ಯಾನಿಸುವ ಅಭ್ಯಾಸವನ್ನು ನೀವು ಅಳವಡಿಸಿಕೊಳ್ಳಬಹುದು. 

ಈ ಪರಿಚಯಾತ್ಮಕ ಸರಣಿಯಲ್ಲಿ ಈ ಎಂಟು ವಿದ್ಯೆಗಳನ್ನು ನಿಮಗೆ ಪ್ರಸ್ತುತಪಡಿಸಲು ವೇದಿಕ್ ಟ್ರೈಬ್ ಗೆ ಸಂತೋಷವಾಗಿದೆ

ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕುವುದು ನಮ್ಮ ಉದ್ದೇಶವಾಗಿದೆ, ಇದರಿಂದ ನೀವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತೀರಿ ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತೀರಿ ಎಂಬ ಆಶಯ ನಮಗಿದೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

No comments:

Post a Comment