Six meditation techniques directly from Yoga Sutras - for beginners

Thursday, December 7, 2023

ವೈದಿಕ ಸಂಪ್ರದಾಯದ ಬಗ್ಗೆ ಇರುವ ಹತ್ತು ತಪ್ಪು ಕಲ್ಪನೆಗಳು

ವೈದಿಕ ಸಂಪ್ರದಾಯದ ಬಗ್ಗೆ ಇರುವ ಹತ್ತು ತಪ್ಪು ಕಲ್ಪನೆಗಳು

ಪರಿಚಯ:
 
18 ನೇ ಶತಮಾನದ ಅಂತ್ಯದ ವೇಳೆಗೆ, ಯುರೋಪಿಯನ್ನರು ವೈದಿಕ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದರು ಮತ್ತು ಅದರ ಶ್ರೀಮಂತಿಕೆ ಮತ್ತು ವೈಶಾಲ್ಯತೆಯಿಂದ ಸಂಪೂರ್ಣವಾಗಿ ಮಂತ್ರಮುಗ್ಧರಾಗಿದ್ದರು. ಯುರೋಪಿಯನ್ನರ ಪಕ್ಷಪಾತವಿಲ್ಲದ ಅಧ್ಯಯನದ ಮತ್ತು ಪ್ರಸ್ತುತಿಯ ಈ ಕಾಲಘಟ್ಟವನ್ನು ಈಗ "ರೊಮ್ಯಾಂಟಿಕ್ ಓರಿಯಂಟಲಿಸಂ" ಎಂದು ಕರೆಯಲಾಗುತ್ತದೆ (1785-1830).

ಆದರೆ, ಅವರ ವಸಾಹತುಶಾಹಿ ನಿಯಂತ್ರಣವು ಹೆಚ್ಚಾದಂತೆ, ವೈದಿಕ ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಸ್ತುತಿ ಬಹುತೇಕ ಬದಲಾಯಿತು. 

ಮ್ಯಾಕ್ಸ್ ಮುಲ್ಲರ್‌ನಂತಹ ವಿದ್ವಾಂಸರಿಗೆ ಈಸ್ಟ್ ಇಂಡಿಯಾ ಕಂಪನಿಯು ಹಣಕೊಟ್ಟು ವೈದಿಕ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ನಿಯಮಿಸಿತು. ಇದು ಪಾಶ್ಚಾತ್ಯ ಸಂಸ್ಕೃತಿಯನ್ನು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಶ್ರೇಷ್ಠ ಎಂದು ಪ್ರದರ್ಶಿಸುವ, ಹಾಗೆಯೇ ಭಾರತೀಯ ಸಂಸ್ಕೃತಿಯನ್ನು ಮತ್ತು ವೈದಿಕ ಸಂಪ್ರದಾಯವನ್ನು ಕೀಳು ಎಂದು ತೋರಿಸುವ ದುರುದ್ದೇಶದಿಂದ ಕೂಡಿತ್ತು.

ಮ್ಯಾಕ್ಸ್ ಮುಲ್ಲರ್ ಸ್ವತಃ ನಂತರ ಈ ವಸಾಹತುಶಾಹಿ ಕಾರ್ಯತಂತ್ರವನ್ನು ಒಪ್ಪಿಕೊಂಡ ಮತ್ತು ಅವನ ಜೀವನದ ಕೊನೆಯ 30 ವರ್ಷಗಳಲ್ಲಿ ತನ್ನದೇ ಆದ ಸಿದ್ಧಾಂತಗಳನ್ನು ವಿರೋಧಿಸಿದ. (ಅವನ ಸ್ವಂತ "ದಿ ಲೈಫ್ ಅಂಡ್ ಲೆಟರ್ಸ್ ಆಫ್ ಫ್ರೆಡ್ರಿಕ್ ಮ್ಯಾಕ್ಸ್ ಮುಲ್ಲರ್" ಮತ್ತು ಬಿ.ಬಿ. ಲಾಲ್ ಅವರ "ಆರಿಜಿನ್ ಆಫ್ ಇಂಡಿಯನ್ ಸಿವಿಲೈಸೇಷನ್.” ಓದಿ). 

ಅದೇನೇ ಇದ್ದರೂ, ನಂತರ ವಸಾಹತುಶಾಹಿ ಪ್ರಚಾರದ ಪ್ರಭಾವದಿಂದಾಗಿ, ಇ ವಿ ರಾಮಸ್ವಾಮಿ / ಪೆರಿಯಾರ್ ಅಂತಹ ಕೆಲವು ಸಂಘನಕಾರರು ಮತ್ತು ರಾಜಕಾರಣಿಗಳು ವಸಾಹತುಶಾಹಿ ಸಿದ್ಧಾಂತವನ್ನೇ ಎರವಲು ಪಡೆದರು. ಇದರಿಂದ ವೈದಿಕ ಸಂಸ್ಕೃತಿಯ ಬಗೆಗಿನ ತಪ್ಪು ಗ್ರಹಿಕೆಗಳು ಸ್ವತಂತ್ರೋತ್ತರ ಭಾರತದಲ್ಲಿ ಮುಖ್ಯವಾಹಿನಿಗೆ ಪ್ರವೇಶಿಸಿತು.

 ಇಂದು ಸೆಮಿಟಿಕ್ ಧರ್ಮಗಳ ಪ್ರಚಾರಕರು ಮತ್ತು ಎಡಪಂಥೀಯರು ಈ ತಪ್ಪು ಗ್ರಹಿಕೆಗಳನ್ನು ಬಳಸಿಕೊಂಡು, ತಮ್ಮ ತಮ್ಮ ಮತಗಳನ್ನು ಹರಡುತ್ತಿದ್ದಾರೆ ಮತ್ತು ಸಾಂಪ್ರದಾಯಿಕ ಭಾರತೀಯರ ಮನೋಶಕ್ತಿ ಕುಂದಿಸುತ್ತಿದ್ದಾರೆ.

ವೇದಿಕ್ ಟ್ರೈಬ್ ಗೆ, ವೈದಿಕ ಸಂಪ್ರದಾಯದ ಬಗೆಗೆ ಇರುವ ಹತ್ತು ಜನಪ್ರಿಯ ತಪ್ಪು ಕಲ್ಪನೆಗಳ ಮೇಲಿನ ಈ ಸರಣಿಯನ್ನು ಪ್ರಸ್ತುತಪಡಿಸಲು ಸಂತೋಷವಾಗಿದೆ. 

ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕುವುದು ನಮ್ಮ ಉದ್ದೇಶವಾಗಿದೆ. ಇದರಿಂದ ನೀವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತೀರಿ ಮತ್ತು ಸಮಾಜದಲ್ಲಿ ಪ್ರಚಲಿತದಲ್ಲಿರುವ ತಪ್ಪು ಅಭಿಪ್ರಾಯಗಳ ವಿರುದ್ಧ ಅದನ್ನು ರಕ್ಷಿಸುತ್ತೀರಿ ಎಂಬ ಆಶಯ ನಮ್ಮಲ್ಲಿದೆ.

ಒಳ್ಳೆಯದಾಗಲಿ.

ಮಧ್ವೇಶ ಕೆ
ವೇದಿಕ್ ಟ್ರೈಬ್


1. ವೇದಗಳನ್ನು ಕ್ರಿ.ಪೂ 1500-900 ಸಮಯದಲ್ಲಿ ಬರೆಯಲಾಯಿತು - ಒಂದು ತಪ್ಪು ಕಲ್ಪನೆ

ವೈದಿಕ ಜ್ಞಾನವು ಅನಾದಿ ಕಾಲದಿಂದಲೂ ಮೌಖಿಕವಾಗಿ ಹರಿದುಬಂದಿದೆ. ಇದು ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಬರವಣಿಯ ರೂಪ ಕಂಡಿತು. ಇಂದು ಉಳಿದಿರುವ ಅತ್ಯಂತ ಹಳೆಯ ಹಸ್ತಪ್ರತಿಯು ಸುಮಾರು 980 ವರ್ಷಗಳಷ್ಟು ಹಳೆಯದಾಗಿದೆ (ಕ್ರಿ.ಶ 1040).

1870 ರ ದಶಕದಲ್ಲಿ, ಫ್ರೆಡ್ರಿಕ್ ಮ್ಯಾಕ್ಸ್ ಮುಲ್ಲರ್ ವೇದಗಳನ್ನು 3000 ವರ್ಷಗಳ ಹಿಂದೆ ಬರೆಯಲಾಗಿದೆ ಎಂದು ಊಹಿಸಿದ. ಆದಾಗ್ಯೂ, ಇದು ಕೇವಲ ಕಾಲ್ಪನಿಕ ಎಂದು ಅವನೇ ಒಪ್ಪಿಕೊಂಡಿದ್ದ. ಋಗ್ವೇದದ ಕುರಿತಾದ ಅವನ ಪುಸ್ತಕದ ಮುನ್ನುಡಿಯಲ್ಲಿ ಅವನು "ನಾನು ವೈದಿಕ ಸಾಹಿತ್ಯದ ಮೊದಲ ಅವಧಿಯನ್ನು ನಿಯೋಜಿಸಲು ಹೇಳಿದ ಕಾಲಘಟ್ಟಗಳು ಕೇವಲ ಕಾಲ್ಪನಿಕ" ಎಂದು ಬರೆಯುತ್ತಾನೆ.

ಸಮಕಾಲೀನ ಭಾಷಾಶಾಸ್ತ್ರದ ಸಿದ್ಧಾಂತಗಳು (ಅಂದರೆ, ವೈದಿಕ ಭಾಷೆಯ ರೂಪ ಮತ್ತು ರಚನೆಯ ಆಧಾರದ ಮೇಲೆ) ವೇದಗಳನ್ನು 3500 ವರ್ಷಗಳ ಹಿಂದೆ ರಚಿಸಲಾಗಿದೆ ಎಂದು ಸೂಚಿಸುತ್ತದೆ (ಕ್ರಿ.ಪೂ 1500-900). ಆದರೆ ವಿದ್ವಲ್ಲೋಕದಲ್ಲಿ ಇದರ ಬಗೆಗೆ ಯಾವುದೇ ಒಮ್ಮತವಿಲ್ಲ. ಏಕೆಂದರೆ ಪುರಾತತ್ತ್ವ ಶಾಸ್ತ್ರದಂತಹ ಇತರ ಪುರಾವೆಗಳನ್ನು ಪರಿಗಣಿಸಲಾಗಿಲ್ಲವಾದುದರಿಂದ ಬರೇ ಭಾಷಾಶಾಸ್ತ್ರದ ಆಧಾರವು ಸಮರ್ಪಕವಾಗುವುದಿಲ್ಲ . ಸಿಂಧೂ ಕಣಿವೆ ನಾಗರಿಕತೆಯು ವೈದಿಕ ಸಂಸ್ಕೃತಿಯ ಗಮನಾರ್ಹ ಲಕ್ಷಣಗಳನ್ನು ಹೊಂದಿದ್ದರೂ, ಇದು "ವೇದ-ಪೂರ್ವ ಸಂಸ್ಕೃತಿ" ಎಂದು ತಳ್ಳಿಹಾಕಲಾಗುತ್ತದೆ.

2014 ರಲ್ಲಿ, ಸ್ಟೆಫನಿ ಜೇಮಿಸನ್ ಮತ್ತು ಜೋಯಲ್ ಬ್ರೆರೆಟನ್ ಅವರು ವೈದಿಕ ಸಾಹಿತ್ಯದ ಕಾಲಘಟ್ಟ-ನಿರ್ಣಯವು "ವಿವಾದ ಮತ್ತು ಮರುಪರಿಶೀಲನೆಯ ವಿಷಯವಾಗಿದೆ ಮತ್ತು ಹಾಗೆಯೇ ಉಳಿಯುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ. ("ದಿ‌ ಋಗ್ವೇದ: ದಿ ಅರ್ಲಿಯೆಸ್ಟ್ ರಿಲಿಜಿಯಸ್ ಪೊಯೆಟ್ರಿ ಆಫ್ ಇಂಡಿಯಾ" ಓದಿ)

ಇದರ ಹೊರತಾಗಿಯೂ, ಈ "ಕ್ರಿ.ಪೂ 1500-900" ಭಾರತೀಯ ಶಿಕ್ಷಣದಲ್ಲಿ ಸುವರ್ಣ ಗುಣಮಟ್ಟದಂತಾಗಿಬಿಟ್ಟಿದೆ. ವೈದಿಕ ಜ್ಞಾನವು ಸನಾತನವಾಗಿದೆ ಎಂದು ನಿಸ್ಸಂದಿಗ್ಧವಾಗಿ ಸೂಚಿಸುವ ಪ್ರಾಚೀನ ಮತ್ತು ಅರ್ವಾಚೀನ ವೈದಿಕ ಸಾಹಿತ್ಯವನ್ನು ಗಮನಿಸುವುದೂ ಇಲ್ಲ. ಇದರ ಜತೆಗೆ ಸಿಂಧೂ ಕಣಿವೆ ನಾಗರಿಕತೆಯು "ವೇದ-ಪೂರ್ವ ಸಂಸ್ಕೃತಿ" ಎಂದು ಕರೆಯಲಾಗುತ್ತದೆ. 

ಹಾಗಾಗಿ ಸಮಕಾಲೀನ ಶಿಕ್ಷಣ ಮತ್ತು ವೈದಿಕ ಸಾಹಿತ್ಯದ ಬೆಳಕಿನಲ್ಲಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ.

ನೀವು ಬಿ.ಬಿ. ಲಾಲ್ ಅವರ "ಆರಿಜಿನ್ ಆಫ್ ಇಂಡಿಯನ್ ಸಿವಿಲೈಸೇಷನ್” ಪುಸ್ತಕದೊಂದಿಗೆ ನಿಮ್ಮ ಅಧ್ಯಯನವನ್ನು ಪ್ರಾರಂಭಿಸಬಹುದು.

ನಮ್ಮ ಮುಂದಿನ ಬರಹದಲ್ಲಿ, "ವೇದವು ದೇವರ ವಾಕ್ಯ" ಎಂಬ ಎರಡನೆಯ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


2. ವೇದವು ದೇವರ ಮಾತು - ತಪ್ಪು ಕಲ್ಪನೆ

ಅಬ್ರಹಾಮಿಕ್ ಧರ್ಮಗಳಲ್ಲಿ, ಟೋರಾ, ಜಬುರ್, ಗಾಸ್ಪೆಲ್ ಮತ್ತು ಕುರಾನ್ ಅನ್ನು "ದೇವರ ಮಾತು" ಎಂದು ಪರಿಗಣಿಸಲಾಗುತ್ತದೆ; ಅಂದರೆ ದೇವರು ನೇರವಾಗಿ ಅಥವಾ ದೇವದೂತರ ಮೂಲಕ ಆಯಾ ಪ್ರವಾದಿಗೆ ಅವುಗಳನ್ನು ಉಪದೇಶಿಸಿದ ಎಂದು ಪರಿಗಣಿಸಲಾಗುತ್ತದೆ.

ಅದೇ ವೈದಿಕ ಸಂಪ್ರದಾಯದಲ್ಲಿ - ಸಾಹಿತ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ: ಶ್ರುತಿ ಮತ್ತು ಸ್ಮೃತಿ. 

"ಶ್ರುತಿ" ಎಂಬುದು ಅನಾದಿಯಾದ ಜ್ಞಾನವಾಗಿದೆ (ಅಪೌರುಷೇಯ - ಯಾರೂ ರಚಿಸಿದ್ದಲ್ಲ). ಇದು ಇತರ ಅನಾದಿ ತತ್ವಗಳೊಂದಿಗೆ (ಪ್ರಕೃತಿ, ಜೀವಾತ್ಮ...ಇತ್ಯಾದಿ) ಸಹ-ಶಾಶ್ವತವಾಗಿ ಇರುವ ತತ್ವವಾಗಿದೆ. ಸೃಷ್ಟಿಯನ್ನು ಪ್ರವೇಶಿಸುವ ಮೊದಲ ಜೀವವಾದ ವಿರಿಂಚಿಗೆ ಭಗವಂತನಿಂದ ಈ "ಶೃತಿ"ಯು ಉಪದೇಶಿಸಲ್ಪಟ್ಟಿತು. ಋಷಿಗಳು ತಮ್ಮ ತಪಸ್ಸಿನ ಮೂಲಕ ಈ ಜ್ಞಾನದ ಒಂದು ಸಣ್ಣ ಭಾಗವನ್ನು ಪಡೆದರು ಮತ್ತು ಹಂಚಿದರು. ಇದೇ ನಮಗೆ ಈಗ ಲಭ್ಯವಿರುವ "ವೇದ". 

"ಸ್ಮೃತಿ" ಎಂಬುದು "ಶ್ರುತಿ"ಯ ಹೊರತಾಗಿ ಉಳಿದೆಲ್ಲವೂ ಎಂದು ಹೇಳಬಹುದು. ಈ ತರಹದ ಅನೇಕ ವೈದಿಕ ಸಾಹಿತ್ಯವನ್ನು ಭಗವಂನೂ ಸೇರಿದಂತೆ ಹಲವರು ರಚಿಸಿದ್ದಾರೆ. ಉದಾಹರಣೆಗೆ, ಮಹಾಭಾರತವನ್ನು ಸ್ವತಃ ಭಗವಂತನು ವ್ಯಾಸರೂಪಿಯಾಗಿ ರಚಿಸಿದ, ಋಷಿಗಳು ಧರ್ಮ ಶಾಸ್ತ್ರಗಳನ್ನು ರಚಿಸಿದರು, ಹಾಗೇ ಇಂದೂ ಹಲವು ವಿದ್ವಾಂಸರಿಂದ ಗ್ರಂಥ ರಚನೆ ಆಗುತ್ತಲೇ ಇದೆ.

"ಸ್ಮೃತಿ" ಯು ಪೌರುಷೇಯವಾದರೆ, "ಶೃತಿ" (ವೇದಗಳು) ಅಪೌರುಷೇಯ.

ಇದನ್ನು ಲೆಕ್ಕಿಸದೆ, ಜನಪ್ರಿಯ ಸಂಸ್ಕೃತಿಯಲ್ಲಿ ವೇದವನ್ನು ದೇವರ ವಾಕ್ಯವೆಂದು ಕರೆಯಲಾಗುತ್ತದೆ. ಇದನ್ನು ಪ್ರಾಥಮಿಕವಾಗಿ ಪಾಶ್ಚಿಮಾತ್ಯ ಪ್ರೇಕ್ಷಕರಿಗೆ ಅರ್ಥವಾಗುವಂತೆ ಬಳಸಲಾಗಿತ್ತು. ಆದರೆ ದುಃಖಕರ ಸಂಗತಿವಯೆಂದರೆ ಈ ಬಳಕೆಯು ಭಾರತೀಯ ಸಮಾಜದಲ್ಲಿ ಮುಖ್ಯವಾಹಿನಿಗೆ ಪ್ರವೇಶಿಸಿಬಿಟ್ಟಿದೆ.

ಹಾಗಾಗಿ "ಕಂಪ್ಯಾರಿಟಿವ್ ರಿಲಿಜನ್" ಎಂಬ ಒಂದು ಸಮಕಾಲೀನ ಶಾಸ್ತ್ರದ ಬೆಳಕಿನಲ್ಲಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ.

ನೀವು ಕೇದಾರನಾಥ ತಿವಾರಿ ಅವರ "ಕಂಪ್ಯಾರಿಟಿವ್ ರಿಲಿಜನ್" ಎಂಬ ಪುಸ್ತಕದಿಂದ ನಿಮ್ಮ ಅಧ್ಯಯನವನ್ನು ಪ್ರಾರಂಭಿಸಬಹುದು.

ನಮ್ಮ ಮುಂದಿನ ಬರಹದಲ್ಲಿ, "ಬ್ರಾಹ್ಮಿನಿಸಂ ವೈದಿಕ ಸಾಹಿತ್ಯ ಮತ್ತು ಸಂಸ್ಕೃತಿಗೆ ಮೂಲವಾಗಿದೆ" ಎಂಬ ಮೂರನೇ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

3. "ಬ್ರಾಹ್ಮಿನಿಸಂ" ವೈದಿಕ ಸಾಹಿತ್ಯ ಮತ್ತು ಸಂಸ್ಕೃತಿಗೆ ಮೂಲವಾಗಿದೆ - ಇದು ತಪ್ಪು ಕಲ್ಪನೆ

ಸಮಕಾಲೀನ ವಿಚಾರವಾದದಲ್ಲಿ, "ಬ್ರಾಹ್ಮಿನಿಸಂ" ಅನ್ನು ಹಿಂದೂ ಧರ್ಮಕ್ಕೆ ಪರ್ಯಾಯ ಪದವೆಂದು ಪರಿಗಣಿಸಲಾಗುತ್ತದೆ. ಇದು ಬ್ರಾಹ್ಮಣ-ಜಾತಿಯ ಪುರೋಹಿತಶಾಹಿ ಸಿದ್ಧಾಂತವೇ ಹಿಂದೂ ಧರ್ಮದ ಮೂಲ ತತ್ವ ಎಂಬಂತೆ ಪ್ರಚಾರ ಪಡೆದಿದೆ.
 
ಈ ತಪ್ಪು ಕಲ್ಪನೆಯು ವಸಾಹತುಶಾಹಿ ಪ್ರಚಾರ, ಪಾಶ್ಚಿಮಾತ್ಯ ಪಕ್ಷಪಾತ ಮತ್ತು ಮಾರ್ಕ್ಸ್‌ವಾದದಿಂದ ಹುಟ್ಟಿತು ಮತ್ತು ಬ್ರಾಹ್ಮಣ ಜನಾಂಗದಲ್ಲಿ ಆಚರಣೆಯಿರುವ ಪ್ರತ್ಯೇಕತೆಯಿಂದಾಗಿ ಇದು ಪುಷ್ಠಿ ಪಡೆಯಿತು.

ಮೊದಲನೆಯದಾಗಿ, 16 ನೇ ಶತಮಾನದಲ್ಲಿ ಮೂಲ ಪದ "ಬ್ರಹ್ಮನಿಸ್ಮೊ" (ಪೋರ್ಚುಗೀಸ್) ಅನ್ನು ಗೊನ್ಸಾಲೊ ಫೆರ್ನಾಂಡಿಸ್ ಟ್ರಾಂಕೋಸೊ ಎಂಬ ಬರಹಗಾರ ಸೃಷ್ಟಿಸಿದ. ಪೂರ್ವದ ಇತರ ಸಂಪ್ರದಾಯಗಳಿಂದ ವೈದಿಕ ಸಂಪ್ರದಾಯವನ್ನು ಪ್ರತ್ಯೇಕಿಸಿ ಹೇಳಲು ಈ ಪದ ಬಳಕೆ ಆಯಿತು. ವೈದಿಕ ಸಂಪ್ರದಾಯವು "ಪರಬ್ರಹ್ಮನ" ಮೇಲೆ ಕೇಂದ್ರೀಕೃತವಾಗಿರುವುದರಿಂದ ಅವನು "ಬ್ರಹ್ಮನ್-ಇಸ್ಮೋ" ಎಂಬ ಪದವನ್ನು ನಿಯೋಜಿಸಿದ (ಜರ್ನಲ್ ಆಫ್ ಅಲ್ಲಿ ಮಾಡರ್ನ್ ಹಿಸ್ಟೋರಿ - 24 (2020) 463-470 ನೋಡಿ). ಇಂಗ್ಲಿಷ್‌ನಲ್ಲಿನ ಈ ಪದ "ಬ್ರಹ್ಮಣ-ಇಸಂ" ಆಗಿ ನಂತರ ವಸಾಹತುಶಾಹಿ ಪ್ರಚಾರದ ಭಾಗವಾಗಿ "ಬ್ರಾಹ್ಮಣ-ಇಸಂ" ಎಂದು ತಿರುಚಲಾಯಿತು..

ಎರಡನೆಯದಾಗಿ, 14 ನೇ ಶತಮಾನದವರೆಗೆ ಯುರೋಪ್-ನಲ್ಲಿ ಕ್ಯಾಥೊಲಿಕ್ ಪುರೋಹಿತಶಾಹಿಯು ಪ್ರಾಬಲ್ಯ ಹೊಂದಿತ್ತು ಮತ್ತು ಇದು ಧಾರ್ಮಿಕ ದಬ್ಬಾಳಿಕೆ ಮತ್ತು ರಾಜ್ಯದ ಮೇಲೆ ಚರ್ಚ್‌ನ ನಿಯಂತ್ರಣಕ್ಕೆ ಮೂಲವಾಗಿತ್ತು. ಯುರೋಪಿಯನ್ನರು ಈ ಪೂರ್ವಾಗ್ರಹವನ್ನು ಭಾರತೀಯ ಸಂಸ್ಕೃತಿಯ ಅಧ್ಯಯನಕ್ಕೆ ಒಡ್ಡಿದರು ಮತ್ತು ಅದೇ ರೀತಿಯ ದಬ್ಬಾಳಿಕೆಯು ವೈದಿಕ ಪುರೋಹಿತಶಾಹಿ ವರ್ಗದಿಂದ ಕೂಡ ಆಯಿತು ಎಂದು ಪ್ರಚಾರ ಮಾಡಿದರು. 

ಮೇಲೆ ಹೇಳಿದ ಪ್ರಚಾರ ಮತ್ತು ಪೂರ್ವಾಗ್ರಹ ಎರಡೂ ಭಾರತೀಯ ಸಮಾಜಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಯಿತು ಮತ್ತು ವಸಾಹತುಶಾಹಿ ಶಕ್ತಿಗಳಿಗೆ ಮಹತ್ತರವಾಗಿ ಸೇವೆ ಸಲ್ಲಿಸಿತು. 

ಭಾರತದಲ್ಲಿ, ಮೇಲೆ ಹೇಳಿದ ವಿಚಾರಗಳು ಮಾರ್ಕ್ಸ್‌ವಾದಿ ಕಲ್ಪನೆಯೊಂದಿಗೆ ಬೆಸೆದುಕೊಂಡು ಮುಖ್ಯವಾಹಿನಿಯ ದೃಷ್ಟಿಕೋನಕ್ಕೆ ಕಾರಣವಾಯಿತು ಮತ್ತು ಇಂದು ಸಂಪೂರ್ಣ ಹಿಂದೂ ಧರ್ಮವೇ ಸ್ವಾರ್ಥ ಬ್ರಾಹ್ಮಣವರ್ಗದ ತತ್ವಗಳ ತದ್ರೂಪವಾಗಿದೆ ಎಂದು ಹೇಳಲಾಗುತ್ತದೆ. ಈ ದೃಷ್ಟಿಕೋನವು ವೈದಿಕ ಸಾಹಿತ್ಯ ಮತ್ತು ಸಂಪ್ರದಾಯದಲ್ಲಿನ "ಬ್ರಾಹ್ಮಣ್ಯ ತತ್ವದ" ಪರಿಕಲ್ಪನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ ಮತ್ತು ಸಂಪೂರ್ಣವಾಗಿ ವಿದೇಶಿ ವಿಚಾರಗಳ ಮೇಲೆ ಅವಲಂಬಿತವಾಗಿದೆ.

ವೈದಿಕ ಸಾಹಿತ್ಯ ಮತ್ತು ಸಂಪ್ರದಾಯದಲ್ಲಿ "ಬ್ರಾಹ್ಮಣ್ಯ ತತ್ವದ" ಪರಿಕಲ್ಪನೆಯನ್ನು ಅಧ್ಯಯನ ಮಾಡುವುದು ಮತ್ತು ಅರ್ಥಮಾಡಿಕೊಳ್ಳುವುದು, ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ (ಇದಕ್ಕೆ ಜಾತಿ / ಪ್ರತ್ಯೇಕತೆಯೊಂದಿಗೆ ಯಾವುದೇ ಸಂಬಂಧವಿಲ್ಲ). ಇದರಿಂದ ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬಹುದು.

ಮಹಾಭಾರತದ ವನ-ಪರ್ವದಲ್ಲಿ "ಅಜಗರ ಉಪಾಖ್ಯಾನ" ಭಾಗವಾಗಿ ಯುಧಿಷ್ಟಿರನ ಸಂಭಾಷಣೆಯನ್ನು ನೀವು ಅಧ್ಯಯನ ಮಾಡಬಹುದು. ಇದು "ಬ್ರಾಹ್ಮಣ್ಯ ತತ್ವದ" ಮೂಲ ಪರಿಕಲ್ಪನೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ ಮತ್ತು "ಬ್ರಾಹ್ಮಿನಿಸಂ" ಎಂದು ಕರೆಯಲ್ಪಡುವ ವಿದೇಶೀ ಸಿದ್ಧಾಂತಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ನಮ್ಮ ಮುಂದಿನ ಬರಹದಲ್ಲಿ, "ವೈದಿಕ ಸಾಹಿತ್ಯವು ಜಾತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ" ಎಂಬ ನಾಲ್ಕನೇ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ.


ಮಧ್ವೇಶ ಕೆ
ವೇದಿಕ್ ಟ್ರೈಬ್


4. ವೈದಿಕ ಸಾಹಿತ್ಯವು ಜಾತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ - ಇದು ತಪ್ಪು ಕಲ್ಪನೆ

ವೈದಿಕ ಸಂಪ್ರದಾಯವು "ಗುಣ-ಕ್ರಿಯೆ ಆಧಾರಿತ - ವರ್ಣ ವ್ಯವಸ್ಥೆ" ಯನ್ನು ಪ್ರತಿಪಾದಿಸುತ್ತದೆ ಮತ್ತು "ಶ್ರೇಣೀಕೃತ - ಹುಟ್ಟನ್ನು ಆಧರಿಸಿದ - ಜಾತಿ ವ್ಯವಸ್ಥೆ"ಯನ್ನು ಅಲ್ಲ. 

ವರ್ಣ ವ್ಯವಸ್ಥೆಯು ಒಂದು ಮೂಲತತ್ವವಾದ ವಿಚಾರ ಆಗಿದ್ದು, ಅದು ಒಂದು ವರ್ಣದ ಶ್ರೇಷ್ಠತೆಯನ್ನು ಇನ್ನೊಂದರ ಕನಿಷ್ಠತೆಯನ್ನು ಒಳಗೊಂಡಿಲ್ಲ. ಅದೇ, ಜಾತಿ-ವ್ಯವಸ್ಥೆಯು ಸಾಮಾಜಿಕ ರಚನೆಯಾಗಿದ್ದು ಅದು ಜನರನ್ನು ಹೆಚ್ಚಾಗಿ ಮೇಲ್ಜಾತಿ ಮತ್ತು ಕೆಳಜಾತಿ ಎಂದು ವರ್ಗೀಕರಿಸುತ್ತದೆ.

ಮಹಾಭಾರತದಲ್ಲಿ, ಯುಧಿಷ್ಠಿರನು "ಗುಣ ಮತ್ತು ನಡವಳಿಕೆ" ಮಾತ್ರ ವರ್ಣವನ್ನು ನಿರ್ಧರಿಸುತ್ತದೆ ಮತ್ತು ಜನ್ಮವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾನೆ.

ಕಾಲಾನಂತರದಲ್ಲಿ, ಸ್ಥಳೀಯ ಸಮಾಜಗಳು ತುರ್ಕರು, ಮೊಘಲರು ಇತ್ಯಾದಿಗಳಿಂದ ಆಕ್ರಮಣಕ್ಕೊಳಗಾದವು, ಅದು ಅವರನ್ನು ರಕ್ಷಣಾತ್ಮಕ ಸಮಾಜವಾಗಿ ಪರಿವರ್ತಿಸಿತು. ಪರಿಣಾಮವಾಗಿ, "ಜಾತಿ ವ್ಯವಸ್ಥೆ" ಪ್ರಾಮುಖ್ಯತೆ ಪಡೆದುಕೊಂಡಿತು ಮತ್ತು "ವರ್ಣ ವ್ಯವಸ್ಥೆ" ಹಿಂದೆ ಬಿದ್ದಿತು. ಈ ಕಾಲಘಟ್ಟದ ಹಿಂದಿನ ಮತ್ತು ಮುಂದಿನ ಸಂಸ್ಕೃತ ಸಾಹಿತ್ಯದ ಹೋಲಿಕೆಯಿಂದ ಇದು ಸ್ಪಷ್ಟವಾಗುತ್ತದೆ.

ನಂತರದ ವಸಾಹತುಶಾಹಿ ಶಕ್ತಿಗಳು ಸ್ಥಳೀಯ ಜನಸಂಖ್ಯೆಯನ್ನು "ಜಾತಿ" ಆಧಾರದ ಮೇಲೆ ವರ್ಗೀಕರಿಸಲು ಅನುಕೂಲಕರವೆಂದು ಕಂಡುಕೊಂಡರು. ಏಕೆಂದರೆ ಅಲ್ಲಿ "ವರ್ಣ" ವ್ಯವಸ್ಥೆಯಂತೆ ಆಯ್ಕೆಗೆ ಅವಕಾಶ ಇರಲಿಲ್ಲ. ಇದು ಭಾರತೀಯ ಸಮಾಜಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಯಿತು ಮತ್ತು ವಸಾಹತುಶಾಹಿ ಶಕ್ತಿಗಳಿಗೆ ಮಹತ್ತರವಾಗಿ ಸೇವೆ ಸಲ್ಲಿಸಿತು. 

ದುಃಖಕರ ಸಂಗತಿಯೆಂದರೆ, ಸ್ವಾತಂತ್ರ್ಯದ ನಂತರ ಇದು ಜಾತಿ-ರಾಜಕೀಯವಾಗಿ ಬದಲಾಗಿದೆ ಮತ್ತು ಇಂದು ಜಾತಿ-ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವುದು ಅಸಾಧ್ಯವೇ ಆಗಿದೆ.

ವೈದಿಕ ಜನಾಂಗದವರಾದ ನಾವು, ವೈದಿಕ-ವರ್ಣ ವ್ಯವಸ್ಥೆ ಮತ್ತು ಸಾಮಾಜಿಕ-ಜಾತಿ ವ್ಯವಸ್ಥೆ ಇವುಗಳನ್ನು ಅಧ್ಯಯನ ಮಾಡಿ, ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಇದು ನಮ್ಮ ಕರ್ತವ್ಯ.

ಇದರ ಬಗೆಗೆ ಇನ್ನೂ ತಿಳಿಯಲು ರಾಜೀವ್ ಮಲ್ಹೋತ್ರಾ ಅವರ "ವರ್ಣ, ಜಾತಿ, ಕ್ಯಾಸ್ಟ್: ಎ ಪ್ರೈಮರ್ ಆನ್ ಇಂಡಿಯನ್ ಸೋಶಿಯಲ್ ಸ್ಟ್ರಕ್ಚರ್ಸ್" ಓದಿ.

ನಮ್ಮ ಮುಂದಿನ ಬರಹದಲ್ಲಿ, ಐದನೇ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ - "ಮಹಿಳೆಯರಿಗೆ ಮತ್ತು ಶೂದ್ರರಿಗೆ ವೇದಾಧ್ಯಯನವನ್ನು ನಿಷೇಧಿಸಲಾಗಿತ್ತು".

ಮಧ್ವೇಶ ಕೆ
ವೇದಿಕ್ ಟ್ರೈಬ್

— 

5. ಮಹಿಳೆಯರಿಗೆ ಮತ್ತು ಶೂದ್ರರಿಗೆ ವೇದಾಧ್ಯಯನವನ್ನು ನಿಷೇಧಿಸಲಾಗಿತ್ತು - ಇದು ತಪ್ಪು ಕಲ್ಪನೆ 

ಮಹಾಭಾರತದಲ್ಲಿ, ಯುಧಿಷ್ಠಿರನು ಅರ್ಹತೆ ಸಂಪಾಸಿದ ಯಾರಾದರೂ ವೇದಗಳಲ್ಲಿ ದೀಕ್ಷೆ ಪಡೆಯಬಹುದು ಎಂದು ಹೇಳುತ್ತಾನೆ. (ವನ-ಪರ್ವದಲ್ಲಿ “ಅಜಗರ ಉಪಾಖ್ಯಾನ” ನೋಡಿ).

ಸತ್ಯಕಾಮ ಜಬಾಲನು ಹರಿದ್ರುಮತ ಗೌತಮರಿಂದ ವೇದಗಳಲ್ಲಿ ದೀಕ್ಷೆ ಪಡೆದನು. ಸತ್ಯಕಾಮನ ಜಾತಿಯು ಯಾವುದೆಂದು ತಿಳಿದಿಲ್ಲ ಎಂಬ ಅಂಶವನ್ನು ಲೆಕ್ಕಿಸದೆ ಗೌತಮರು ದೀಕ್ಷೆ ಕೊಟ್ಟರು. ಈ ದೀಕ್ಷೆಗೆ ಸತ್ಯಕಾಮನ ಸತ್ಯ-ಸಂಕಲ್ಪವೇ ಅರ್ಹತೆಯಾಗಿತ್ತು.

ವೇದಗಳ ಅಧ್ಯಯನಕ್ಕೆ ದೀಕ್ಷೆ ತೊಟ್ಟ ಮಹಿಳೆಯರನ್ನು "ಬ್ರಹ್ಮವಾದಿನಿ" ಎಂದು ಕರೆಯಲಾಗುತ್ತಿತ್ತು ಮತ್ತು ಅವರಲ್ಲಿ ಅನೇಕರು ವೇದಮಂತ್ರಗಳ ದೃಷ್ಟಾರರಾದರು. "ಸರ್ವಾನುಕ್ರಮಣಿ"ಯಲ್ಲಿ, ಕಾತ್ಯಾಯನನು ಅಂತಹ ಅನೇಕ ದೃಷ್ಟಾರರನ್ನು ಉಲ್ಲೇಖಿಸುತ್ತಾನೆ. 

ಮಧ್ಯಕಾಲೀನ ಭಾರತದಲ್ಲಿ, ವಿದೇಶಿ ಆಕ್ರಮಣ ಮತ್ತು ಆಳ್ವಿಕೆಯಿಂದಾಗಿ, ಭಾರತೀಯ ಸಮಾಜವು ರಕ್ಷಣಾತ್ಮಕವಾಗಿ ತಿರುಗಿತು ಮತ್ತು ಇದಕ್ಕೆ ಸಂವಾದಿಯಾಗಿ ಸಾಂಪ್ರದಾಯಿಕತೆಯು ಜನಪ್ರಿಯತೆಯನ್ನು ಗಳಿಸಿತು. ಈ ಸಾಂಪ್ರದಾಯಿಕತೆಯ ಭಾಗವಾಗಿ, ಮಹಿಳೆಯರು ಮತ್ತು ಶೂದ್ರರು ವೇದಾಧ್ಯಯನ ಮತ್ತು ಅಭ್ಯಾಸದಿಂದ ನಿಷೇಧಿಸಲ್ಪಟ್ಟರು. ಇದು ಅರ್ವಾಚೀನ ಶಾಸ್ತ್ರಗಳ ಭಾಗವೂ ಆಯಿತು ಮತ್ತು ನೂರಾರು ವರ್ಷಗಳ ಸಾಮಾಜಿಕ ಬೇಧಭಾವದಲ್ಲಿ ಪರ್ಯವಸಾನವಾಯಿತು. 

ಶ್ರೀ ದಯಾನಂದ ಸರಸ್ವತಿ, ಶ್ರೀ ಅರಬಿಂದೋ... ಇತ್ಯಾದಿ ವಿದ್ವಾಂಸರ ಪ್ರಯತ್ನಗಳಿಂದಾಗಿ ವೇದಾಧ್ಯಯನವು ಈಗ ಎಲ್ಲರಿಗೂ ವ್ಯಾಪಕವಾಗಿ ಲಭ್ಯವಿದೆ.

ಈ ಸತ್ಯವನ್ನು ಲೆಕ್ಕಿಸದೆಯೇ, ಭಾರತೀಯ ಮುಖ್ಯವಾಹಿನಿಯ ಶಿಕ್ಷಣವು ಈಗಲೂ ಮೂಲ ವೈದಿಕ ಸಂಪ್ರದಾಯವೇ ಬೇಧಭಾವ ಹೊಂದಿದೆ ಎಂದು ಹೇಳುತ್ತದೆ. ಇದು ಮೇಲ್ಜಾತಿಯ ಜನರಲ್ಲಿ ಆಚರಣೆಯಲ್ಲಿರುವ ಪ್ರತ್ಯೇಕತೆಯೊಂದಿಗೆ ಸೇರಿಕೊಂಡು, ಎಡಪಂಥೀಯರಿಗೆ ಮತ್ತು ಹಿಂದುದ್ವೇಷದ ಸಮುದಾಯಗಳಿಗೆ ಹಿಂದೂಗಳಲ್ಲಿ ಕೀಳರಿಮೆ ಮತ್ತು ಬಿಕ್ಕಟ್ಟನ್ನು ಹರಡಲು ಅವಕಾಶ ಮಾಡಿಕೊಟ್ಟಿದೆ.

ವೈದಿಕ ಜನಾಂಗದವರಾದ ನಾವು, ವೈದಿಕ ಸಂಪ್ರದಾಯದಲ್ಲಿನ ಉದಾರವಾದ ಮತ್ತು ಬಹುತ್ವದ ಆದರ್ಶಗಳನ್ನು ಅಧ್ಯಯನ ಮಾಡಬೇಕು. ಹಾಗೆಯೇ ನಂತರದ ಸಾಮಾಜಿಕ ಮಾರ್ಪಾಟುಗಳು ಮತ್ತು ಸಮಕಾಲೀನ ವಿಚಾರವಾದಗಳನ್ನೂ ಅಧ್ಯಯನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಇದು ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

ಇದರ ಬಗೆಗೆ ಇನ್ನೂ ತಿಳಿಯಲು "ಉಮೆನ್ ಇನ್ ಋಗ್ವೇದ" (ಭಗವತ್ ಸರನ್ ಉಪಾಧ್ಯಾಯ) ಮತ್ತು "ವಾಲ್ಮೀಕಿ ಅಂಡ್ ವೇದವ್ಯಾಸ: ಕಲ್ಚರಲ್ ಲೀಡರ್ಸ್ ಆಫ್ ಇಂಡಿಯಾ" (ಕಮಲಾ ರತ್ನಂ ಮತ್ತು ಆರ್ ರಂಗಾಚಾರಿ) ಪುಸ್ತಕಗಳನ್ನು ಓದಬಹುದು.

ನಮ್ಮ ಮುಂದಿನ ಬರಹದಲ್ಲಿ, “ವೇದಾಂತ ಎಂದರೆ ಅದ್ವೈತ" ಎಂಬ ಆರನೇ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


6. ವೇದಾಂತ ಎಂದರೆ ಅದ್ವೈತ - ಒಂದು ತಪ್ಪು ಕಲ್ಪನೆ

ವೈದಿಕ ಸಂಪ್ರದಾಯವು ಬಹುತ್ವವಾದವನ್ನು ಮತ್ತು ಅಸಂಖ್ಯಾತ ಚಿಂತನೆಯ ಶಾಖೆಗಳನ್ನು (ದರ್ಶನಗಳನ್ನು) ಒಳಗೊಂಡಿದೆ.

ಆರು ಪ್ರಮುಖ ಶಾಖೆಗಳೆಂದರೆ: ಸಾಂಖ್ಯ, ಯೋಗ, ನ್ಯಾಯ, ವೈಶೇಶಿಕ, ಮೀಮಾಂಸ ಮತ್ತು ವೇದಾಂತ. ಅವುಗಳಲ್ಲಿ "ವೇದಾಂತ" ಶಾಖೆಯನ್ನು ಇಂದು ಬಹುತೇಕ ಹಿಂದೂಗಳು ಅನುಸರಿಸುತ್ತಾರೆ. ಇತರ ಶಾಖೆಗಳು ಇಂದು ಕೇವಲ ಅಧ್ಯಯನಕ್ಕೆ ಸೀಮಿತವಾಗಿದೆ ಮತ್ತು ಒಂದೆರಡು ಶಾಖೆಗಳು ತಮ್ಮ ಮೂಲ ರೂಪದಿಂದ ಬದಲಾಗಿವೆ (ಉದಾ. ಯೋಗ).

ವೇದಾಂತ ಶಾಖೆಯ ಮೂಲ ಗ್ರಂಥಗಳನ್ನು ಪ್ರಸ್ಥಾನತ್ರಯಿ ಎಂದು ಕರೆಯಲಾಗುತ್ತದೆ: ಭಗವದ್ಗೀತೆ, ಉಪನಿಷತ್ತುಗಳು ಮತ್ತು ಬ್ರಹ್ಮ-ಸೂತ್ರ.

ಬ್ರಹ್ಮ-ಸೂತ್ರದ ಯಾವುದೇ ಭಾಷ್ಯವು ನಂತರ, ವೇದಾಂತದ ಉಪಶಾಖೆಗಳಿಗೆ ಮೂಲಗ್ರಂಥವಾದವು. ಶ್ರೀ ಆದಿ ಶಂಕರಾಚಾರ್ಯರ ಭಾಷ್ಯವು ಅದ್ವೈತ ಉಪಶಾಖೆಗೆ, ಶ್ರೀ ರಾಮಾನುಜಾಚಾರ್ಯರದ್ದು ವಿಶಿಷ್ಟಾದ್ವೈತಕ್ಕೆ ಮತ್ತು ಶ್ರೀ ಮಧ್ವಾಚಾರ್ಯರದ್ದು ತತ್ತ್ವವಾದಕ್ಕೆ ಮೂಲ ಗ್ರಂಥವಾಯಿತು.

14 ನೇ ಶತಮಾನದಲ್ಲಿ, ಶ್ರೀ ನಾರಾಯಣ ಪಂಡಿತಾಚಾರ್ಯರು ತಮ್ಮ "ಮಧ್ವವಿಜಯ ಭಾವಪ್ರಕಾಶಿಕಾ" ದಲ್ಲಿ ಶ್ರೀ ಮಧ್ವಾಚಾರ್ಯರಿಗಿಂತ ಮೊದಲು ಅಂತಹ 21 ಭಾಷ್ಯಗಳಿದ್ದವು ಎಂದು ದಾಖಲಿಸುತ್ತಾರೆ. ಆದರೆ ಅವರ ಕಾಲದಲ್ಲಿ ಮೂರು ಮಾತ್ರ ಲಭ್ಯವಿತ್ತು: ಶ್ರೀ ಶಂಕರಾಚಾರ್ಯರದ್ದು, ಶ್ರೀ ಭಾಸ್ಕರರದ್ದು ಮತ್ತು ಶ್ರೀ ರಾಮಾನುಜಾಚಾರ್ಯರದ್ದು. 

ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಸ್ವಾಮಿ ವಿವೇಕಾನಂದರ ಪ್ರಭಾವದಿಂದಾಗಿ "ಅದ್ವೈತ" ಉಪಶಾಖೆಯು ಜನಪ್ರಿಯತೆಯನ್ನು ಗಳಿಸಿತು. ಇದರ ಪರಿಣಾಮವಾಗಿ ಅನೇಕ ಸಾಂಪ್ರದಾಯಿಕ ಮತ್ತು ಆಧುನಿಕ ವಿದ್ವಾಂಸರು "ವೇದಾಂತ" ಮತ್ತು "ಅದ್ವೈತ" ಪದಗಳನ್ನು ಪರ್ಯಾಯವಾಗಿ ಬಳಸುತ್ತಾರೆ. ವೇದಾಂತದಲ್ಲಿ ಅನೇಕ ಉಪ-ಶಾಖೆಗಳಿವೆ ಎಂಬ ಅಂಶವನ್ನು ಗಮನಿಸುವುದಿಲ್ಲ ಅಥವಾ ಅವುಗಳನ್ನು ವಿರಳವಾಗಿ ಉಲ್ಲೇಖಿಸಲಾಗುತ್ತದೆ.
 
 ವೇದಾಂತದ ವಿವಿಧ ಉಪ-ಶಾಖೆಗಳನ್ನು ಅಧ್ಯಯನ ಮಾಡುವುದು ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ತೆರವುಗೊಳಿಸುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ.

ಇನ್ನೂ ಹೆಚ್ಚು ತಿಳಿಯಲು ಬಿ. ಎನ್. ಕೃಷ್ಣಮೂರ್ತಿ ಶರ್ಮರವರ "ದಿನ ಬೃಹ್ಮಸೂತ್ರಾಸ್ ಅಂಡ್ ದೇರ್ ಪ್ರಿನ್ಸಿಪಲ್ ಕಾಮೆಂಟರೀಸ್: ಎ ಕ್ರಿಟಿಕಲ್ ಎಕ್ಸ್ಪೊಸಿಷನ್" ಪುಸ್ತಕವನ್ನು ಓದಿ.

ನಮ್ಮ ಮುಂದಿನ ಬರಹದಲ್ಲಿ, "ವೈದಿಕ ಸಂಪ್ರದಾಯವೇ ಬಹುದೇವತಾವಾದವು" ಎಂಬ ಏಳನೇ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ.


ಮಧ್ವೇಶ ಕೆ
ವೇದಿಕ್ ಟ್ರೈಬ್


7. ವೈದಿಕ ಸಂಪ್ರದಾಯವೇ ಬಹುದೇವತಾವಾದವು - ಒಂದು ತಪ್ಪು ಕಲ್ಪನೆ

ಸಮಕಾಲೀನ ವಿಚಾರವಾದದಲ್ಲಿ "ಏಕದೇವತಾವಾದ" ಎಂದರೆ ಒಬ್ಬ ದೇವರಲ್ಲಿ ನಂಬಿಕೆ ಮತ್ತು "ಬಹುದೇವತಾವಾದ" ಎನ್ನುವುದು ವಿಭಿನ್ನ ದೇವರುಗಳಲ್ಲಿ ನಂಬಿಕೆ ಎಂದು ಗುರುತಿಸಲಾಗುತ್ತದೆ.

ವೈದಿಕ ಸಂಪ್ರದಾಯದವನ್ನು "ಬಹುದೇವತಾವಾದಿ" ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಮೇಲ್ನೋಟಕ್ಕೆ ಇಲ್ಲಿ ವಿಭಿನ್ನ ದೇವರುಗಳನ್ನು ಪೂಜಿಸಲಾಗುತ್ತದೆ. 

ಋಗ್ವೇದದಲ್ಲಿನ ಸೂಕ್ತಗಳನ್ನು 33 ಪ್ರಮುಖ ದೇವತೆಗಳಿಗೆ ಸಮರ್ಪಿಸಲಾಗಿದೆ. ಶಾಸ್ತ್ರೀಯ ಸಾಹಿತ್ಯವು 33 ಕೋಟಿ ದೇವತೆಗಳನ್ನು ಉಲ್ಲೇಖಿಸುತ್ತದೆ. ವೇದದ ಮೂಲಭೂತ ಸಾರವನ್ನು ಅರ್ಥಮಾಡಿಕೊಳ್ಳದ ಕೆಲವು ಹಿಂದೂಗಳು ಮತ್ತು ಸೆಮಿಟಿಕ್ ಪ್ರಚಾರಕರ ಕೈಯಲ್ಲಿ ಇದು ಗೊಂದಲ ಮತ್ತು ಅಪಹಾಸ್ಯಕ್ಕೆ ಕಾರಣವಾಗಿದೆ.

ವೇದದ ಮೂಲಭೂತ ಸಾರವನ್ನು ಪ್ರಸ್ಥಾನತ್ರಯಿ ವಿಶೇಷವಾಗಿ ಕ್ರೋಢೀಕರಿಸುತ್ತದೆ: ಉಪನಿಷದ್, ಬ್ರಹ್ಮ-ಸೂತ್ರ, ಮತ್ತು ಭಗವದ್ಗೀತೆ.

ಪ್ರಸ್ಥಾನತ್ರಯಿಯ ಎಲ್ಲಾ ಗ್ರಂಥಗಳೂ ವೈದಿಕ ಏಕದೇವತಾವಾದವನ್ನು ಎತ್ತಿ ಹೇಳುತ್ತವೆ. ಉದಾಹರಣೆಗೆ,‌ ಶ್ವೇತಾಶ್ವತರ ಉಪನಿಷತ್ತು ಎಲ್ಲದರಲ್ಲೂ ಒಬ್ಬನೇ ದೇವರಿದ್ದಾನೆ ಎಂದು ಘೋಷಿಸುತ್ತದೆ (6:11). ಬ್ರಹ್ಮ ಸೂತ್ರವು 'ಇಡೀ ವೈದಿಕ ಸಾಹಿತ್ಯವು ಎಲ್ಲದಕ್ಕಿಂತ ಹಿರಿಯದಾದ ತತ್ವವನ್ನು ಜಿಜ್ಞಾಸಿಸಲು ಇದೆ' ಎಂದು ಹೇಳುವ ಮೂಲಕ ಪ್ರಾರಂಭವಾಗುತ್ತದೆ. (1.1.1). ಎಲ್ಲಾ ತಾತ್ಕಾಲಿಕ ಸೃಷ್ಟಿಗೆ ಶಾಶ್ವತವಾದ ಒಂದು ಮೂಲವಿದೆ ಎಂದು ಭಗವದ್ಗೀತೆ ಹೇಳುತ್ತದೆ (2.17). 

ಅದೇನೇ ಇದ್ದರೂ, ಸಾಮಾನ್ಯ ಜನರ ಅನುಕೂಲಕ್ಕಾಗಿ, ಋಷಿಗಳು ವಿಭಿನ್ನ ದೇವತೆಗಳನ್ನು ಪೂಜಿಸಲು ವಿಭಿನ್ನ ಸಂಪ್ರದಾಯಗಳನ್ನು ಹುಟ್ಟುಹಾಕಿಕೊಟ್ಟಿದ್ದಾರೆ. ಹಾಗಾಗಿ ಅಪಾತತಃ ವೈದಿಕ ಸಂಪ್ರದಾಯವು ಬಹುದೇವತಾವಾದದಂತೆ ತೋರುತ್ತವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವೈದಿಕ ಸಂಪ್ರದಾಯವು ಬಹುತ್ವವನ್ನೊಳಗೊಂಡ-ಏಕದೇವತಾವಾದವೇ ಆಗಿದೆ.

ವೈದಿಕ ದೈವೀ ಮೀಮಾಂಸೆಯನ್ನು ಅಧ್ಯಯನ ಮಾಡುವುದು ಮತ್ತು ಅರ್ಥಮಾಡಿಕೊಂಡು ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ತೆರವುಗೊಳಿಸುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ.

ಇನ್ನೂ ತಿಳಿಯಲು ಆನಂದ ಕುಮಾರಸ್ವಾಮಿ ಅವರ "ವೇದಿಕ್ ಮೋನೋತೀಇಸಮ್" ಓದಿ.

ನಮ್ಮ ಮುಂದಿನ ಬರಹದಲ್ಲಿ, ನಾವು "ಸನಾತನ-ಧರ್ಮವು ಹಿಂದೂ ಉಗ್ರವಾದ". ಎಂಬ ಎಂಟನೆಯ ತಪ್ಪು ಕಲ್ಪನೆಯನ್ನು ಚರ್ಚಿಸುತ್ತೇವೆ. 

ಮಧ್ವೇಶ ಕೆ
ವೇದಿಕ್ ಟ್ರೈಬ್



8. ಸನಾತನ-ಧರ್ಮ ಎಂದರೆ ಹಿಂದೂ ಉಗ್ರವಾದ - ತಪ್ಪು ಕಲ್ಪನೆ

ವಸಾಹತುಗಳಾಗಿದ್ದ ಅನೇಕ ದೇಶಗಳು ಇಂದೂ ಆಳವಾದ "ಸಾಂಸ್ಕೃತಿಕ ಕೀಳರಿಮೆ"ಯಿಂದ ಬಳಲುತ್ತಿವೆ. ಭಾರತದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರವೂ, ಹೆಚ್ಚಿನ ಹಿಂದೂಗಳು ವೈದಿಕ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇದು ವಸಾಹತುಶಾಹಿ ಪ್ರಚಾರದ ನೇರ ಪರಿಣಾಮವಾಗಿದೆ ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ಹುಸಿ-ಜಾತ್ಯಾತೀತವಾದವಾಗಿ ಮತ್ತು ಹಿಂದೂಫೋಬಿಯಾ ಆಗಿ ರೂಪುಗೊಂಡಿದೆ.

ಮ್ಯಾಕ್ಸ್ ಮುಲ್ಲರ್ ನ (19 ನೇ ಶತಮಾನ) ಮಾತುಗಳಲ್ಲಿ "ಇದು (ವೇದ) ಅವರ ಧರ್ಮದ ಮೂಲವಾಗಿದೆ, ಮತ್ತು ಮೂಲ ಯಾವುದು ಎಂದು ಅವರಿಗೆ ತೋರಿಸುವುದು, ಅದರಿಂದ ಹೊರಹೊಮ್ಮಿದ ಎಲ್ಲವನ್ನೂ ಕಿತ್ತುಹಾಕುವ ಏಕೈಕ ಮಾರ್ಗವಾಗಿದೆ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ". ಅದೇ ವಿಚಾರಧಾರೆಯನ್ನು ಇತ್ತೀಚೆಗೆ (ಸೆಪ್ಟೆಂಬರ್ 2023) ಉದಯನಿಧಿ ಸ್ಟಾಲಿನ್ ಅವರು ಅಸ್ಪೃಶ್ಯತೆಯನ್ನು ತೊಡೆದುಹಾಕುವ ವಿಭಿನ್ನ ನೆಪದಲ್ಲಿ ವ್ಯಕ್ತಪಡಿಸಿದ್ದಾರೆ. ಇದು 19ನೇ ಶತಮಾನದಲ್ಲಿ ಮೆಕಾಲೆ ಹೇಳಿದ ಮಾತು ಯಶಸ್ವಿಯಾಗಿದೆ ಎಂದು ತಿಳಿಸುತ್ತದೆ: "ನಮ್ಮ ಮತ್ತು ನಾವು ಆಳುವ ಲಕ್ಷಾಂತರ ಜನರ ನಡುವೆ ವ್ಯಾಖ್ಯಾನಕಾರರಾಗಬಹುದಾದ ವರ್ಗವನ್ನು ರೂಪಿಸಲು ನಾವು ಪ್ರಸ್ತುತ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು; ಈ ಒಂದು ವರ್ಗದ ವ್ಯಕ್ತಿಗಳು, ರಕ್ತ ಮತ್ತು ಬಣ್ಣದಲ್ಲಿ ಭಾರತೀಯರಾಗಿರಲಿ, ಆದರೆ ಅಭಿರುಚಿಯಲ್ಲಿ, ಅಭಿಪ್ರಾಯಗಳಲ್ಲಿ, ನೈತಿಕತೆಗಳಲ್ಲಿ ಮತ್ತು ಬುದ್ಧಿಯಲ್ಲಿ ಆಂಗ್ಲರಾಗಿರಲಿ."

ಜನಪ್ರಿಯ ಮಾಧ್ಯಮಗಳಲ್ಲಿ "ಸನಾತನ ಧರ್ಮ" ಮತ್ತು "ಸನಾತನಿ(ಗಳು)" ಗೂಂಡಾಗಳು, ದುರುಪಯೋಗ ಮಾಡುವವರು, ಬೆದರಿಸುವವರು ಅಥವಾ ದರೋಡೆಕೋರರು ಎಂದು ಚಿತ್ರಿಸಲಾಗುತ್ತದೆ. ಮತ್ತೊಂದೆಡೆ, ಚರ್ಚ್ ಫಾದರ್ ಗಳನ್ನು ಮತ್ತು ಮುಲ್ಲಾಗಳನ್ನು ಶಾಂತಿಯುತ ಸಂತ ವ್ಯಕ್ತಿಗಳಾಗಿ ಚಿತ್ರಿಸಲಾಗುತ್ತದೆ. ಇದಲ್ಲದೆ, ಈಗ "ಸನಾತನ ಧರ್ಮ" ಎಂಬ ಪದವನ್ನು ಒಂದು ಕಾಲ್ಪನಿಕ "ಹಿಂದೂ ಉಗ್ರವಾದ"ವನ್ನು ಸೂಚಿಸಲು ಬಳಸಲಾಗುತ್ತಿದೆ.

"ಸನಾತನ ಧರ್ಮ" ಎಂಬುದು ಒಂದು ಶಾಶ್ವತ ಸತ್ಯದ ಅನ್ವೇಷಣೆಯ ಮಾರ್ಗವಾಗಿದೆ ಮತ್ತು ಇಡೀ ವೈದಿಕ ಸಂಪ್ರದಾಯವು ಇದರ ಅನ್ವೇಷಣೆಗಾಗಿ ಇದೆ. ದುಃಖಕರ ಸಂಗತಿ ಎಂದರೆ - ಇಂಡಿಯನ್ ಮತ್ತು ಹಿಂದೂ ಅಂತಹ ವಿದೇಶಿ ಪದಗಳು ಮುಖ್ಯವಾಹಿನಿಯಲ್ಲಿ ಗುರುತಾಗಿದೆ ಆದರೆ ಸನಾತನಿ ಅಥವಾ ವೈದಿಕ ಮುಂತಾದ ಸ್ವಂತ ಪದಗಳು ಇಲ್ಲ. ನಾವು ಅನುಭವಿಸುತ್ತಿರುವ ಆಳವಾದ ಸಾಂಸ್ಕೃತಿಕ ಕೀಳರಿಮೆ ಇದಕ್ಕೆ ಕಾರಣ.

ಸನಾತನ ಧರ್ಮದ ಸಾರವನ್ನು ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳುವುದು ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ತೆರವುಗೊಳಿಸುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ.

ಇಂದಿನ ಹುಸಿ-ಜತ್ಯಾತೀತವಾದ ಮತ್ತು ಹಿಂದೂಫೋಬಿಯಾಕ್ಕೆ ಕಾರಣವಾದ ವಸಾಹತುಶಾಹಿ ಪ್ರಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನೀವು ಈ ಪುಸ್ತಕಗಳನ್ನು ಓದಬಹುದು “ದಿ ಲೈಫ್ ಅಂಡ್ ಲೆಟರ್ಸ್ ಆಫ್ ಫ್ರೆಡ್ರಿಕ್ ಮ್ಯಾಕ್ಸ್ ಮುಲ್ಲರ್” ಮತ್ತು ಸತ್ ಶರ್ಮರವರ "ಕರಪ್ಟ್ ಇನೆಪ್ಟ್ ರಡರ್ಲೆಸ್ ಪಾಲಿಟಿಷನ್ಸ್: ಇಂಪೆಡಿಮೆಂಟ್ಸ್ ಟು ಇಂಡಿಯಾಸ್ ಫಾರ್ವರ್ಡ್ ಮಾರ್ಚ್"

ನಮ್ಮ ಮುಂದಿನ ಬರಹದಲ್ಲಿ, ನಾವು "ಆಕ್ರಮಣಕಾರಿ ಆರ್ಯರು ವೇದವನ್ನು ಪರಿಚಯಿಸಿದರು". ಎಂಬ ಒಂಭತ್ತನೇ ತಪ್ಪು ಕಲ್ಪನೆಯನ್ನು ಚರ್ಚಿಸುತ್ತೇವೆ. 


ಮಧ್ವೇಶ ಕೆ
ವೇದಿಕ್ ಟ್ರೈಬ್



9. ಆಕ್ರಮಣಕಾರಿ ಆರ್ಯರು ವೇದವನ್ನು ಪರಿಚಯಿಸಿದರು - ಇದು ತಪ್ಪು ಕಲ್ಪನೆ

"ಆರ್ಯ" ಎಂಬ ಪದವು - ಶ್ರಮ ಮತ್ತು ಹೋರಾಟದ ಮೂಲಕ ಸತ್ಯಕ್ಕೆ, ಸ್ವರ್ಗಕ್ಕೆ (ವಿಮೋಚನೆಗೆ) ದುಡಿಯುವ ಸಾಧಕ ಎಂದು ಶ್ರೀ ಅರಬಿಂದೋ ಸೂಚಿಸುತ್ತಾರೆ.

ಸಾಂಪ್ರದಾಯಿಕ ಸಾಹಿತ್ಯದಲ್ಲಿ ಈ ಪದವನ್ನು ಮುಖ್ಯವಾಗಿ "ನಾಗರಿಕರು" ಅಥವಾ "ವೈದಿಕ ಜನರು" ಎಂಬುದನ್ನು ಸೂಚಿಸಲು ಬಳಸಲಾಗುತ್ತಿತ್ತು.

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣನು ಅರ್ಜುನನ ಗೋಳಾಟವನ್ನು "ಅನಾರ್ಯಮ್" (ಅನಾಗರೀಕ) ಎಂದು ಕರೆಯುತ್ತಾನೆ (2:2)

ನಂತರ, ಧರ್ಮ ಶಾಸ್ತ್ರಗಳು ವೈದಿಕ ಜನರ ತಾಯ್ನಾಡನ್ನು ಸೂಚಿಸಲು ಉಪಖಂಡವನ್ನು (ವ್ಯತ್ಯಯಗಳೊಂದಿಗೆ) "ಆರ್ಯಾವರ್ತ" ಎಂದು ಕರೆದರು.

ಆದ್ದರಿಂದ, "ಆರ್ಯ" ಎಂಬ ಪದವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅರ್ಥವನ್ನು ಹೊಂದಿತ್ತು, ಆದರೆ ಎಂದಿಗೂ ಜನಾಂಗೀಯತೆ, ಜನಾಂಗ ಅಥವಾ ಕುಲವನ್ನು ಸೂಚಿಸಲಿಲ್ಲ. 

19 ನೇ ಶತಮಾನದಲ್ಲಿ, ಮ್ಯಾಕ್ಸ್ ಮುಲ್ಲರ್ ನ "ಆರ್ಯನ್" ಕಲ್ಪನೆಯನ್ನು ಜರ್ಮನ್ ರಾಷ್ಟ್ರೀಯತಾವಾದಿಗಳು ಅಳವಡಿಸಿಕೊಂಡರು. ಈ ಕಲ್ಪನೆಯನ್ನು ಉಪಖಂಡವನ್ನು ಆಕ್ರಮಿಸಿದ ಮತ್ತು ವೇದಗಳನ್ನು ಪರಿಚಯಿಸಿದ ಯುರೋಪಿಯನ್ನರ ಒಂದು ಉನ್ನತ ಜನಾಂಗವನ್ನು ಪ್ರತಿಪಾದನೆ ಮಾಡಲು ಉಪಯೋಗಿಸಲಾಯಿತು. ವೈದಿಕ ಸಾಹಿತ್ಯವು ಸಪ್ತ-ಸಿಂಧು ಪ್ರದೇಶ (ವಾಯುವ್ಯ ಉಪಖಂಡ) ಮತ್ತು ಪಂಚ-ಅಪ ಪ್ರದೇಶ (ಪಂಜಾಬ್) ಅನ್ನು ವೇದ-ಭೂಮಿ ಎಂದು ಕರೆಯುತ್ತದೆ ಎಂಬ ಅಂಶವನ್ನು ಲೆಕ್ಕಿಸದೆಯೇ ಈ ಪ್ರತಿಪಾದನೆ ಮಾಡಲಾಗಿತ್ತು .

ಮ್ಯಾಕ್ಸ್ ಮುಲ್ಲರ್ ಸ್ವತಃ ಈ ಊಹೆಯನ್ನು ಟೀಕಿಸುವ ಮೂಲಕ "ನಾನು ಆರ್ಯನ್ ಎಂದು ಹೇಳಿದರೆ, ನನ್ನ ಅರ್ಥ ರಕ್ತ ಅಥವಾ ಮೂಳೆ ಅಥವಾ ತಲೆಬುರುಡೆ ಅಥವಾ ಕೂದಲು ಅಲ್ಲ ಎಂದು ನಾನು ಮತ್ತೆ ಮತ್ತೆ ಘೋಷಿಸಿದ್ದೇನೆ; ನನ್ನ ಅರ್ಥ ಸರಳವಾಗಿ ಆರ್ಯಭಾಷೆಯನ್ನು (ವೈದಿಕ ಸಂಸ್ಕೃತವನ್ನು) ಮಾತನಾಡುವವರು ..." ಎಂದು ಹೇಳಿದ್ದಾನೆ

ಸಮಕಾಲೀನ ವಿದ್ವಾಂಸರು "ಆಕ್ರಮಣ" ಸಿದ್ಧಾಂತವನ್ನು ಕೈಬಿಟ್ಟಿದ್ದಾರೆಯಾದರೂ, "ವಲಸೆ" ಸಿದ್ಧಾಂತವನ್ನು ಭಾಷಾಶಾಸ್ತ್ರದ ಅಪರಿಪೂರ್ಣ ಅಧಾರಗಳೊಂದಿಗೆ ಇನ್ನೂ ಪ್ರತಿಪಾದಿಸಲಾಗುತ್ತದೆ. ಇಡೀ ವೈದಿಕ ಮತ್ತು ಶಾಸ್ತ್ರೀಯ ಸಾಹಿತ್ಯದಲ್ಲಿ ವೈದಿಕ ಜನರ ಯಾವುದೇ ಆಕ್ರಮಣ ಅಥವಾ ವಲಸೆಯ ಉಲ್ಲೇಖವಿಲ್ಲ ಎಂಬ ಅಂಶವನ್ನು ಇದು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ.

ಆದರೆ ದುಃಖಕರ ಸಂಗತಿ ಎಂದರೆ, ಆರ್ಯರ ಆಕ್ರಮಣ ಸಿದ್ಧಾಂತವು ಭಾರತೀಯ ಮುಖ್ಯವಾಹಿನಿ ಶಿಕ್ಷಣದಲ್ಲಿ ಇನ್ನೂ ಇದೆ. 

ಆರ್ಯರ ಆಕ್ರಮಣ / ವಲಸೆ ಸಿದ್ಧಾಂತವನ್ನು ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳುವುದು ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ತೆರವುಗೊಳಿಸುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ.

ಇನ್ನಷ್ಟು ತಿಳಿಯಲು, ನೀವು ಸ್ಟೀಫನ್ ನ್ಯಾಪ್ ರವರ ಈ ಪುಸ್ತಕ ಓದಬಹುದು "ಆರ್ಯನ್ ಇನ್ವೇಷನ್ ತಿಯರಿ: ದ ಫೈನಲ್ ನೈಲ್ ಇನ್ ಇಟ್ಸ್ ಖಾಫೆನ್" “

ನಮ್ಮ ಮುಂದಿನ ಬರಹದಲ್ಲಿ, "ವೈದಿಕ ಸಾಹಿತ್ಯವು ಪ್ರಸ್ತುತತೆಯನ್ನು ಕಳೆದುಕೊಂಡಿದೆ" ಎಂಬ ಹತ್ತನೆಯ ತಪ್ಪು ಕಲ್ಪನೆಯನ್ನು ನಾವು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


10. ವೈದಿಕ ಸಾಹಿತ್ಯವು ಪ್ರಸ್ತುತತೆಯನ್ನು ಕಳೆದುಕೊಂಡಿದೆ - ತಪ್ಪು ಕಲ್ಪನೆ

ವೈದಿಕ ಸಾಹಿತ್ಯವು ಆಚರಣೆ, ಉಪಾಸನೆ, ತತ್ವಶಾಸ್ತ್ರ, ಇತಿಹಾಸ, ವಿಶ್ವವಿಜ್ಞಾನ, ವಿಶ್ವಶಾಸ್ತ್ರ, ಭೂಗೋಳ, ಆಧ್ಯಾತ್ಮಿಕತೆ, ಔಷಧಗಳು, ಕಲೆ, ವಾಸ್ತುಶಿಲ್ಪ, ಮನೋವಿಜ್ಞಾನ ಇತ್ಯಾದಿ ಅಸಂಖ್ಯಾತ ವಿಷಯಗಳನ್ನು ಒಳಗೊಂಡಿದೆ.

ಇವಲ್ಲಿ ಕೆಲವು ಇಂದು ಪ್ರಸ್ತುತತೆ ಕಳೆದು ಕೊಂಡಿವೆ. ಉದಾ. ವೈಶೇಷಿಕ ದರ್ಶನವು ಪ್ರಾಚೀನ ತತ್ತ್ವಶಾಸ್ತ್ರದೊಂದಿಗೆ ಮುಂಚೂಣಿಯಲ್ಲಿ ಇತ್ತು. ಆದರೆ ವೈಜ್ಞಾನಿಕ ವಿಧಾನಗಳಲ್ಲಿನ ಪ್ರಗತಿಯನ್ನು ಸಾಧಿಸಿದ ಮೇಲೆ, ಇದು ಇಂದು ಪ್ರಸ್ತುತತೆಯನ್ನು ಕಳೆದುಕೊಂಡು ಬರೇ ಶೈಕ್ಷಣಿಕ ಮಹತ್ವವನ್ನು ಮಾತ್ರ ಉಳಿಸಿಕೊಂಡಿದೆ. 

ಅಂತೆಯೇ, "ಮೇರು ಪರ್ವತ" ದ ಮೇಲೆ ಕೇಂದ್ರೀಕೃತವಾಗಿರುವ ಪುರಾತನ ಕಾಸ್ಮೊಗ್ರಫಿಯು ವೀಕ್ಷಣಾ ವಿಶ್ವವಿಜ್ಞಾನ ಮತ್ತು ಸೈದ್ಧಾಂತಿಕ ಭೌತಶಾಸ್ತ್ರದ ಬೆಳವಣಿಗೆಯಿಂದಾಗಿ ಇಂದು ಅತೀಂದ್ರಿಯವಾದದಲ್ಲಿ ಮಾತ್ರ ಮಹತ್ವವನ್ನು ಉಳಿಸಿಕೊಂಡಿದೆ.

ಜಂಬೂ ದ್ವೀಪ (ಮಲಬಾರ್ ಪ್ಲಮ್ ಮರಗಳ ನಾಡು) ಮತ್ತು ದಧಿ ಸಮುದ್ರ (ಮೊಸರಿನ ಸಮುದ್ರ) ಇಂತಹವನ್ನು ಉಲ್ಲೇಖಿಸುವ ಪ್ರಾಚೀನ ಭೌಗೋಳಿಕತೆಯೂ ಕೂಡ - ಇಂದು ಅತೀಂದ್ರಿಯವಾದದಲ್ಲಿ ಮಾತ್ರ ಮಹತ್ವವನ್ನು ಉಳಿಸಿಕೊಂಡಿದೆ.

ಉಪಖಂಡದ ಇತಿಹಾಸ, ಮಾನವಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿಗಳನ್ನು ಅಧ್ಯಯನ ಮಾಡಲು ಇಂದು ವಿದ್ವಾಂಸರು ವೈದಿಕ ಸಾಹಿತ್ಯದಲ್ಲಿರುವ ಭೌಗೋಳಿಕ ಉಲ್ಲೇಖಗಳು, ವೈಶ್ವಿಕ ಘಟನೆಗಳು, ಭಾಷೆಯ ರಚನೆ ಇತ್ಯಾದಿಗಳನ್ನು ಬಳಸುತ್ತಾರೆ. 

ಆದಾಗ್ಯೂ, ಭಾರತದ ಎಡಪಂಥೀಯರು ಮತ್ತು ಸೆಮಿಟಿಕ್ ಪ್ರಚಾರಕರು - ಸಂಪೂರ್ಣ ವೈದಿಕ ಸಾಹಿತ್ಯವೇ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದು ವಾದಿಸುತ್ತಾರೆ. ಈ ವಾದವು ಕೆಲವು ವಾಸ್ತವಿಕವಾಗಿ ಎದ್ದು ಕಾಣುವ ವಿಚಾರಗಳನ್ನೇ ಉಪೇಕ್ಷಿಸುತ್ತದೆ; ಉದಾ. ವೇದಗಳು ಸಾರ್ವತ್ರಿಕ ಸಂದೇಶಗಳನ್ನು ಒಳಗೊಂಡಿರುತ್ತವೆ; ವೇದಾಂತವು ಅತ್ಯಂತ ಅಚ್ಚುಕಟ್ಟಾದ ತತ್ವಶಾಸ್ತ್ರವಾಗಿದೆ; ಯೋಗ ದರ್ಶನದಲ್ಲಿರುವ ಮನಸ್ತತ್ವ ಚಿಂತನೆಯು ಮುಖ್ಯವಾಹಿನಿಯ ಪಾಶ್ಚಿಮಾತ್ಯ ಶಿಕ್ಷಣದಲ್ಲಿ ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ಅತ್ಯಗತ್ಯ ವಸ್ತುವಾಗಿದೆ; ವೈದಿಕ ಸಂಪ್ರದಾಯದಲ್ಲಿ ಭಕ್ತಿಪಂಥವು ಯಾವುದೇ ಮಿಷಿನರಿ ಅಥವಾ ಉಗ್ರವಾದದ ಅಗತ್ಯವಿಲ್ಲದೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿದೆ ಇತ್ಯಾದಿ.

ಮೂಲಭೂತವಾಗಿ, ವೈದಿಕ ಸಂಪ್ರದಾಯದಲ್ಲಿನ ಕೆಲವು ಸಾಹಿತ್ಯವು ಬಳಕೆಯಲ್ಲಿಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನ ಭಾಗದ ಆಚರಣೆಯು ಇಂದಿಗೂ ಮಹತ್ವದ್ದಾಗಿದೆ. ಭಾರತೀಯರಲ್ಲಿ ಮಾತ್ರವಲ್ಲದೆ ಇತರ ಅನೇಕ ಸಂಸ್ಕೃತಿಗಳಲ್ಲಿಯೂ ಸಹ ವೈದಿಕ ಸಂಪ್ರದಾಯಗಳು ಸಾಮರಸ್ಯದಿಂದ ಬೆರೆತಿದೆ.

 ವೈದಿಕ ಸಾಹಿತ್ಯದ ಯಾವ ಭಾಗವು ಅಪ್ರಸ್ತುತ ಮತ್ತು ಯಾವ ಭಾಗಗಳು ಹೆಚ್ಚು ಪ್ರಸ್ತುತ ಎಂಬುದನ್ನು ಅಧ್ಯಯನ ಮಾಡುವುದು ಮತ್ತು ಅರ್ಥಮಾಡಿಕೊಳ್ಳುವುದು ವೈದಿಕ ಜನಾಂಗದವರಾದ ನಮ್ಮ ಕರ್ತವ್ಯವಾಗಿದೆ. ಇದು ಸಮಾಜದಲ್ಲಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇನ್ನೂ ಹೆಚ್ಚು ತಿಳಿಯಲು ನೀವು ಅಗ್ನಿಹೋತ್ರಮ್ ರಾಮಾನುಜ ತಾತಾಚಾರಿಯಾರ್ ಅವರ "ಎಟರ್ನಲ್ ರಿಲವೆನ್ಸ್ ಆಫ್ ವೇದಾಸ್" ಪುಸ್ತಕ ಓದಬಹುದು.

ವೇದಿಕ್ ಟ್ರೈಬ್ ಗೆ, ವೈದಿಕ ಸಂಪ್ರದಾಯದ ಬಗೆಗೆ ಇರುವ ಹತ್ತು ಜನಪ್ರಿಯ ತಪ್ಪು ಕಲ್ಪನೆಗಳ ಮೇಲಿನ ಈ ಸರಣಿಯನ್ನು ಪ್ರಸ್ತುತಪಡಿಸಿದ್ದಕ್ಕೆ ಸಂತೋಷವಾಗಿದೆ. 

ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕುವುದು ನಮ್ಮ ಉದ್ದೇಶವಾಗಿದೆ. ಇದರಿಂದ ನೀವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತೀರಿ ಮತ್ತು ಸಮಾಜದಲ್ಲಿ ಪ್ರಚಲಿತದಲ್ಲಿರುವ ತಪ್ಪು ಅಭಿಪ್ರಾಯಗಳ ವಿರುದ್ಧ ಅದನ್ನು ರಕ್ಷಿಸುತ್ತೀರಿ ಎಂಬ ಆಶಯ ನಮ್ಮಲ್ಲಿದೆ.

ಒಳ್ಳೆಯದಾಗಲಿ.

ಮಧ್ವೇಶ ಕೆ
ವೇದಿಕ್ ಟ್ರೈಬ್


No comments:

Post a Comment