ವೈರಾಗ್ಯದ ನಾಲ್ಕು ಹಂತಗಳು
ಪರಿಚಯ
ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಕೇವಲ ಭೌತಿಕ ಪರಿತ್ಯಾಗದಿಂದ ಬೃಹ್ಮಜ್ಞಾನದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. (3.4).
ವೇದಾಂತದಲ್ಲಿ, ಜ್ಞಾನ ಮತ್ತು ಭಕ್ತಿಯೊಂದಿಗೆ ವೈರಾಗ್ಯವನ್ನು ಸಂಯೋಜಿಸಿದಾಗ ಮಾತ್ರ ಒಬ್ಬರು ಮುಕ್ತಿಯನ್ನು ಸಾಧಿಸಬಹುದು.
ಅದೇನೇ ಇದ್ದರೂ, ವಿಮೋಚನೆಯ ಕಡೆಗೆ ಒಬ್ಬರ ಸಾಧನೆಯಲ್ಲಿ ವೈರಾಗ್ಯವು ಅನಿವಾರ್ಯ ಪಾತ್ರವನ್ನು ವಹಿಸುತ್ತದೆ.
ತ್ವರಿತವಾಗಿ ಮತ್ತು ಸಂಪೂರ್ಣವಾಗಿ ವೈರಾಗಿಯಾಗಲು ಔಪಚಾರಿಕ ಮಾರ್ಗವೆಂದರೆ ಗ್ರಂಥಗಳಲ್ಲಿ ಸೂಚಿಸಿದಂತೆ ಸನ್ಯಾಸ ದೀಕ್ಷೆಯನ್ನು ಹೊಂದುವುದು. ಆದರೆ ನಮ್ಮಲ್ಲಿ ಬಹುಪಾಲು ಜನರಿಗೆ ಇದು ಸಾಧ್ಯವಿಲ್ಲ ಮತ್ತು ಕ್ರಿಯಾತ್ಮಕ ಸಮಾಜವನ್ನು ಉಳಿಸಿಕೊಳ್ಳಲು ಇದು ಸೂಕ್ತವಲ್ಲ.
ಆದ್ದರಿಂದ ವೈರಾಗ್ಯಕ್ಕೆ ಹಂತಹಂತವಾದ ವಿಧಾನವನ್ನು ಸೂಚಿಸಲಾಗಿದೆ.
"ಯೋಗ ಶಾಸ್ತ್ರ"ದಲ್ಲಿ, ಅಂತಹ ಒಂದು ವಿಧಾನವು ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ: “ಯಾತಮಾನ” (ಇಂದ್ರಿಯಗಳ ಹಂಬಲದಿಂದ ಬೇರ್ಪಡುವಿಕೆ), “ವ್ಯತಿರೇಕ” (ಆಸೆಗಳಿಂದ ದೂರವಿರುವುದು), “ಏಕೇಂದ್ರಿಯ” (ಮೋಕ್ಷದ ಒಂದು ವಿಷಯದ ಮೇಲೆ ಮಾತ್ರ ಮನಸ್ಸು ಸ್ಥಿರವಾಗಿಸುವುದು) ಮತ್ತು “ವಶೀಕಾರ” (ಸಂಪೂರ್ಣ ನಿರ್ಲಿಪ್ತತೆ).
ವೈದಿಕ್ ಟ್ರೈಬ್ ಗೆ ಈ ನಾಲ್ಕು ಹಂತಗಳ ವೈರಾಗ್ಯದ ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ. ನಮ್ಮ ಮುಂದಿನ ಬರಹದಲ್ಲಿ, ನಾವು ವೈರಾಗ್ಯದ ಮೊದಲ ಹಂತವಾದ "ಯತಮಾನ" ಅನ್ನು ಪ್ರಸ್ತುತಪಡಿಸುತ್ತೇವೆ.
ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.
ಒಳ್ಳೆಯದಾಗಲಿ.
ಮಧ್ವೇಶ್ ಕೆ
ವೈದಿಕ್ ಟ್ರೈಬ್
—
1. ಯಾತಮಾನ (ಇಂದ್ರಿಯಗಳ ಕಡುಬಯಕೆಯಿಂದ ಬೇರ್ಪಡುವಿಕೆ)
ಆಧ್ಯಾತ್ಮಿಕ ಪ್ರಗತಿಗೆ ಮೊಟ್ಟಮೊದಲ ಅಡಚಣೆ ಎಂದರೆ ಇಂದ್ರಿಯಗಳ ಹಂಬಲ. ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಬಹಳಷ್ಟು ಆರಂಭಿಕರು "ಇನ್ಸ್ಟಾಂಟ್ ಗ್ರಾಟಿಫಿಕೇಷನ್" ನ (ತ್ವರಿತ ತೃಪ್ತಿಯ) ಪ್ರಚೋದನೆಯಿಂದ ತೊಂದರೆಗೊಳಗಾಗುತ್ತಾರೆ.
"ಇನ್ಸ್ಟಾಂಟ್ ಗ್ರಾಟಿಫಿಕೇಷನ್" ಎಂದರೆ ತ್ವರಿತ ತೃಪ್ತಿಯನ್ನು ಅನುಭವಿಸುವ ತಕ್ಷಣದ ಬಯಕೆ (ಅಂದರೆ, ಇಂದ್ರಿಯಗಳನ್ನು ತಕ್ಷಣವೇ ತೃಪ್ತಿಸಲು ಆಗುವ ಕಡುಬಯಕೆ). ಇದು ರಾಗವನ್ನು ಸೃಷ್ಟಿಸುತ್ತದೆ ಮತ್ತು ರಾಗವು ಹೆಚ್ಚು ಕಡುಬಯಕೆಯನ್ನು ಸೃಷ್ಟಿಸುತ್ತದೆ. ರಾಗ ಮತ್ತು ಕಡುಬಯಕೆಯ ಈ ಕುಣಿಕೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಮ್ಮ ಸಾಮರ್ಥ್ಯದ ಮೇಲೆ ನೇರವಾಗಿ ದುಷ್ಪರಿಣಾಮವನ್ನು ಬೀರುತ್ತದೆ.
ಆರಂಭಿಕರಿಗೆ ಕಡುಬಯಕೆಯ ವಿಷಯಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ. ಉದಾಹರಣೆಗೆ, ನಾವು ನಮ್ಮ ಮೊಬೈಲ್ ಫೋನ್‌ಗಳನ್ನು ತೊರೆಯಲು ಸಾಧ್ಯವಿಲ್ಲ; ಸಿಗರೇಟ್ ಅಂಗಡಿಗಳ ಮುಂದೆ ಹಾದುಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ.
ಬದಲಿಗೆ ಕಡುಬಯಕೆಯನ್ನು ಪ್ರಚೋದಿಸುವ ಸಂವೇದನಾ ಸೂಚನೆಗಳಿಂದ ಬೇರ್ಪಡಲು ಸಾಧ್ಯವಿದೆ. ಉದಾಹರಣೆಗೆ, ನೋಟಿಫಿಕೇಶನ್ ಆಫ್ ಮಾಡುವ ಮೂಲಕ ನಾವು ಮೊಬೈಲ್ ಅನ್ನು ಪರೀಕ್ಷಿಸುವ ಹಂಬಲವನ್ನು ಪ್ರಚೋದಿಸುವ ಸಂವೇದನಾ ಸೂಚನೆಗಳಿಂದ ಬೇರ್ಪಡಿಸಬಹುದು. ಧೂಮಪಾನ ಮಾಡುವ ಸ್ನೇಹಿತರನ್ನು ಭೇಟಿಯಾಗುವುದನ್ನು ತಪ್ಪಿಸುವ ಮೂಲಕ, ಧೂಮಪಾನ ಮಾಡುವ ನಮ್ಮ ಕಡುಬಯಕೆಯನ್ನು ಪ್ರಚೋದಿಸುವ ಸಂವೇದನಾ ಸೂಚನೆಗಳಿಂದ ನಾವು ಬೇರ್ಪಡಬಹುದು.
ಯೋಗ-ಶಾಸ್ತ್ರಗಳಲ್ಲಿ ಇದನ್ನು "ಯಾತಮಾನ" ಎಂದು ಕರೆಯಲಾಗುತ್ತದೆ. ಇದನ್ನು "ಮೃದು-ಸಾಧಕ" (ಆರಂಭಿಕ) ರಿಗೆ ಸೂಚಿಸಲಾಗುತ್ತದೆ. ಇದರಲ್ಲಿ ಕಡುಬಯಕೆಯ ಇಂದ್ರಿಯಗಳಿಂದ ಉದ್ದೇಶಪೂರ್ವಕವಾಗಿ ಬೇರ್ಪಡುವಿಕೆಯನ್ನು ಅಭ್ಯಾಸ ಮಾಡಲಾಗುತ್ತದೆ. ಇದರಿಂದ ಇನ್ಸ್ಟಾಂಟ್ ಗ್ರಾಟಿಫಿಕೇಷನ್ ಕೊಡುವ ವಸ್ತುಗಳಿಂದ ಹೆಚ್ಚಿನ ಸಮಯ ದೂರ ಉಳಿಯುವ ಅಭ್ಯಾಸವಾಗುತ್ತದೆ ಮತ್ತು ಇದು ಮುಂದಿನ ಹಂತದ ವೈರಾಗ್ಯಕ್ಕೆ ಅಡಿಪಾಯವಾಗುತ್ತದೆ.
ನೀವು ಈ ಒಂದು ದೈನಂದಿನ ಧ್ಯಾನದ ಅಭ್ಯಾಸವನ್ನು ಅಳವಡಿಸಿಕೊಳ್ಳಬಹುದು. ಈ ಧ್ಯಾನಸ್ಥಿತಿಯಲ್ಲಿ ನೀವು ಇನ್ಸ್ಟಾಂಟ್ ಗ್ರಾಟಿಫಿಕೇಷನ್ ಬೇಡುವ ನಿಮ್ಮ ಕಡುಬಯಕೆಗಳನ್ನು ಗಮನಿಸಬಹುದು. ಗಮನಿಸುವ ನಿಮ್ಮ ಸಾಮರ್ಥ್ಯವು ಹೆಚ್ಚಾದಂತೆ, ಸರಿಯಾದ ಕ್ಷಣದಲ್ಲಿ ಅವುಗಳಿಂದ ದೂರಾಗುವ ನಿಮ್ಮ ಸಾಮರ್ಥ್ಯವೂ ಹೆಚ್ಚಾಗುತ್ತದೆ.
ನಮ್ಮ ಮುಂದಿನ ಬರವಣಿಗೆಯಲ್ಲಿ, ವೈರಾಗ್ಯದ ಎರಡನೇ ಹಂತವಾದ "ವ್ಯತಿರೇಕ"ವನ್ನು ಪ್ರಸ್ತುತಪಡಿಸುತ್ತೇವೆ.
ಮಧ್ವೇಶ್ ಕೆ
ವೈದಿಕ್ ಟ್ರೈಬ್
—
2. ವ್ಯತಿರೇಕ
ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ:, ಕಡುಬಯಕೆಯ ಇಂದ್ರಿಯಗಳು ನಿಗ್ರಹವನ್ನು ಅಭ್ಯಾಸ ಮಾಡುವ ಸಾಧಕನ ಮನಸ್ಸನ್ನೂ ಸಹ ಸುಲಭವಾಗಿ ಸೋಲಿಸುತ್ತವೆ ಮತ್ತು ನಿಗ್ರಹವನ್ನು ನಾಶಮಾಡುತ್ತವೆ. (2.60).
ವೈರಾಗ್ಯದ ಮೊದಲ ಹಂತದಲ್ಲಿ, ನಾವು ಇದ್ರಿಯಗಳ ಕಡುಬಯಕೆಗಳಿಂದ ಬೇರ್ಪಡಲು ಕಲಿತಿದ್ದರೂ ನಮ್ಮ ಮಾನಸಿಕ ಕಡುಬಯಕೆಗಳು ಇನ್ನೂ ಉಳಿದುಕೊಂಡಿರುತ್ತವೆ. ಇದು ಇಂದ್ರಿಯಗಳಿಗೆ ಬಲವನ್ನು ಕೊಟ್ಟು, ಅವು ಮನಸ್ಸನ್ನು ಅತಿಕ್ರಮಿಸಲು ಮತ್ತು ವೈರಾಗ್ಯದ ಮೊದಲ ಹಂತವನ್ನು ನಾಶಮಾಡಲು ಸುಲಭಗೊಳಿಸುತ್ತದೆ.
ಉದಾಹರಣೆಗೆ, ನೋಟಿಫಿಕೇಶನ್ ಆಫ್ ಮಾಡುವ ಮೂಲಕ ನಾವು ನಮ್ಮ ಇಂದ್ರಿಯಗಳನ್ನು ತಾತ್ಕಾಲಿಕವಾಗಿ ಮೊಬೈಲ್ ಫೋನ್‌ಗಳಿಂದ ಬೇರ್ಪಡಿಸಿದ್ದರೂ, ನಮ್ಮ ಮನಸ್ಸು ನಿರಂತರವಾಗಿ ನಮ್ಮ ಫೋನ್‌ಗಳನ್ನು ಪರಿಶೀಲಿಸುವ ಬಯಕೆಯನ್ನು ಉಳಿಸಿಕೊಂಡಿರುತ್ತದೆ. ನಾವು ಧೂಮಪಾನ ಮಾಡುವ ಸ್ನೇಹಿತರಿಂದ ದೂರವಿದ್ದರೂ, ನಮ್ಮ ಮನಸ್ಸು ನಿರಂತರವಾಗಿ ಧೂಮಪಾನ ಮಾಡುವ ಬಯಕೆಯನ್ನು ಹುಟ್ಟುಹಾಕುತ್ತದೆ. ಈ ದುರ್ಬಲ ಮನಸ್ಸು ಇಂದ್ರಿಯಗಳಿಗೆ ಮೊದಲ ಹಂತದ "ಯಾತಮಾನ" ವನ್ನು ನಾಶಮಾಡಲು ಅನುವು ಮಾಡಿಕೊಡುತ್ತದೆ.
ಆದ್ದರಿಂದ, ಸಾಧಕನು ತ್ವರಿತವಾಗಿ ಎರಡನೇ ಹಂತವಾದ ವ್ಯತಿರೇಕಕ್ಕೆ ಹೋಗಬೇಕು; ಅಂದರೆ, ಇಂದ್ರಿಯಮೂಲವಾದ ಬಯಕೆಗಳನ್ನೇ ನಿಲ್ಲಿಸಲು ಮನಸ್ಸಿಗೆ ತರಬೇತಿ ಕೊಡಬೇಕು.
ನಮ್ಮ ಮನಸ್ಸು ಸ್ವಯಂಪೂರ್ಣವಾಗಿಲ್ಲವಾದ ಕಾರಣ, ಅದು ಸತತವಾಗಿ ಇಂದ್ರಿಯಮೂಲವಾದ ಬಯಕೆಗಳನ್ನು ಹುಟ್ಟುಹಾಕುವುದು. ಅದೇ, ಸ್ವಯಂಪೂರ್ಣವಾದ ಮನಸ್ಸು ಜ್ಞಾನ ಮತ್ತು ಭಕ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತದೆ. ಆದ್ದರಿಂದ ನಾವು ನಮ್ಮ ಮನಸ್ಸನ್ನು ಜ್ಞಾನ ಮತ್ತು ಭಕ್ತಿಯಲ್ಲಿ ಮುಳುಗಿಸಲು ತರಬೇತಿ ನೀಡಿದರೆ, ಅದು ಇನ್ನು ಮುಂದೆ ಇಂದ್ರಿಯಮೂಲವಾದ ಬಯಕೆಗಳನ್ನು ಉಂಟುಮಾಡುವುದಿಲ್ಲ. ಇದು ಇಂದ್ರಿಯಗಳ ನಿರಂತರ ದಾಳಿಯನ್ನು ತಡೆದುಕೊಳ್ಳಲು ಮನಸ್ಸಿಗೆ ಬಲವನ್ನು ನೀಡುತ್ತದೆ.
ಯೋಗ-ಶಾಸ್ತ್ರಗಳಲ್ಲಿ "ವ್ಯತಿರೇಕ" ವನ್ನು ಮಧ್ಯಂತರ ಅಭ್ಯಾಸಕಾರರಿಗೆ ಸೂಚಿಸಲಾಗುತ್ತದೆ. ಇದರಲ್ಲಿ ಗ್ರಂಥಗಳ ಅಧ್ಯಯನ, ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದು, ಸತ್ಸಂಗದಲ್ಲಿ ತೊಡಗಿಸಿಕೊಳ್ಳುವುದು, ದೈನಂದಿನ ಪೂಜೆಯನ್ನು ಮಾಡುವುದು ಇತ್ಯಾದಿ ಆಚರಣೆಗಳನ್ನು ಪಾಲಿಸಲಾಗುತ್ತದೆ. ಕಾಲಾಂತರದಲ್ಲಿ ಮನಸ್ಸು ಸ್ವಾವಲಂಬಿಯಾಗುತ್ತದೆ ಮತ್ತು ಇದು ಮುಂದಿನ ಹಂತದ ವೈರಾಗ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ.
ನೀವು ಗ್ರಂಥಗಳನ್ನು ಅಧ್ಯಯನ ಮಾಡುವ ದೈನಂದಿನ ದಿನಚರಿಯನ್ನು ಅಳವಡಿಸಿಕೊಳ್ಳಬಹುದು (ಭಗವದ್ಗೀತೆಯಿಂದ ಪ್ರಾರಂಭಿಸಿ) ಮತ್ತು ನಿಗದಿತ ಸಮಯದವರೆಗೆ ದೈನಂದಿನ ಪೂಜೆಯನ್ನು ಮಾಡಬಹುದು (ಇಷ್ಟದೇವತೆಯನ್ನು ಆರಾಧಿಸಿ). ಇದರಿಂದ ನಿಮ್ಮ ಮನಸ್ಸು ಜ್ಞಾನ ಮತ್ತು ಭಕ್ತಿಯಲ್ಲಿ ಮುಳುಗಿ, ಬಾಹ್ಯ ಇಂದ್ರಿಯಗಳ ಪ್ರಭಾವದಿಂದ ಮುಕ್ತವಾಗುತ್ತದೆ.
ನಮ್ಮ ಮುಂದಿನ ಬರಹದಲ್ಲಿ, ನಾವು "ಏಕೇಂದ್ರಿಯ" ಎಂಬ ವೈರಾಗ್ಯದ ಮೂರನೇ ಹಂತವನ್ನು ಚರ್ಚಿಸುತ್ತೇವೆ.
ಮಧ್ವೇಶ ಕೆ
ವೇದಿಕ್ ಟ್ರೈಬ್
—
3. ಏಕೇಂದ್ರಿಯ
ಎರಡನೇ ಹಂತದಲ್ಲಿ, ಜ್ಞಾನ ಮತ್ತು ಭಕ್ತಿಯಿಂದ ಸ್ವಾವಲಂಬಿಯಾಗಲು ನಮ್ಮ ಮನಸ್ಸನ್ನು ತರಬೇತಿ ಮಾಡಲು ನಾವು ಕಲಿತಿದ್ದೆವು. ಆದಾಗ್ಯೂ, ನಾವು ನಿರಂತರವಾಗಿ ಪ್ರಪಂಚದೊಂದಿಗೆ ವ್ಯವಹಾರ ನಡೆಸುತ್ತಿರುವುದರಿಂದ, ನಮ್ಮ ಮನಸ್ಸು ಅನಿವಾರ್ಯವಾಗಿ ಲೌಕಿಕ ಮತ್ತು ಆಧ್ಯಾತ್ಮಿಕ ನೆಲೆಗಳ ನಡುವೆ ತೂಗಾಡುತ್ತಿರುತ್ತದೆ.
ಮೂರನೇ ಹಂತದಲ್ಲಿ, ಈ ತೂಗಾಟವನ್ನು ನಿಲ್ಲಿಸಲು ಮತ್ತು ವಿಶ್ವಶಕ್ತಿಯ ಮೇಲೆ ಕೇಂದ್ರೀಕೃತವಾಗಿರಲು ನಾವು ನಮ್ಮ ಮನಸ್ಸನ್ನು ತರಬೇತಿ ಮಾಡಬೇಕು. ಅಂತಹ ಪ್ರಜ್ಞೆಯ ಎತ್ತರವು "ತಪಸ್" ಎಂದು ಕರೆಯಲ್ಪಡುವುದು. ಆದರೆ ಇಂತಹ ತಪಸ್ಸಿಗೆ ಪ್ರಾಪಂಚಿಕ ವ್ಯವಹಾರಗಳಿಂದ ಸಂಪೂರ್ಣ ನಿವೃತ್ತಿಯೂ ಮತ್ತು ಏಕಾಂತತೆಯೂ ಬೇಕಾಗುವುದು.
"ತಪಸ್ಸು" ಎಲ್ಲರಿಗೂ ಸಾಧ್ಯವಿಲ್ಲದ ಕಾರಣ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸುಲಭವಾದ ಒಂದು ವಿಧಾನವನ್ನು ಸೂಚಿಸುತ್ತಾನೆ. ಅವನು ಹೇಳುತ್ತಾನೆ “ಯಾರು ಮೋಹಗಳನ್ನು ತೊರೆದು, ತಮ್ಮ ಎಲ್ಲಾ ಕಾರ್ಯಗಳನ್ನು ಪರಮಾತ್ಮನಿಗೆ ಸಮರ್ಪಿಸುತ್ತಾರೆ, ಅವರು ಕಮಲದ ಎಲೆಯು ನೀರಿನಿಂದ ಅಸ್ಪೃಶ್ಯವಾದಂತೆ ಪಾಪದಿಂದ ಅಸ್ಪೃಶ್ಯರಾಗುತ್ತಾರೆ.”(5.10)
ನಮ್ಮ ಎಲ್ಲಾ ಕ್ರಿಯೆಗಳನ್ನು (ದೈಹಿಕ, ವಾಚಿಕ ಮತ್ತು ಮಾನಸಿಕ) ಸಂಪೂರ್ಣವಾಗಿ ಸರ್ವಶಕ್ತನಿಗೆ ಅರ್ಪಿಸುವುದರಿಂದ ನಮ್ಮ ಮನಸ್ಸು ಲೌಕಿಕ ವ್ಯವಹಾರಗಳತ್ತ ವಾಲುವುದನ್ನು ನಿಲ್ಲಿಸುತ್ತದೆ. ಪ್ರಪಂಚದೊಂದಿಗಿನ ಸಂಪರ್ಕವು ಮುಂದುವರಿದರೂ, ಮನಸ್ಸು ಮುಕ್ತಿಯ ವಿಷಯದ ಮೇಲೆಯೇ (ಅಂದರೆ, ಸರ್ವಶಕ್ತನ ಮೇಲೆಯೇ) ಕೇಂದ್ರೀಕೃತವಾಗಿರುತ್ತದೆ.
ಯೋಗ-ಶಾಸ್ತ್ರಗಳಲ್ಲಿ ಈ "ಏಕೇಂದ್ರಿಯ" ಹಂತವನ್ನು ಅಧಿಮಾತ್ರ ಸಾಧಕರಿಗೆ (ತೀವ್ರ ಅಭ್ಯಾಸಿಗಳಿಗೆ) ಸೂಚಿಸಲಾಗುತ್ತದೆ. ಇದರಲ್ಲಿ ವಿಮೋಚನೆಯ ವಿಷಯದ ಮೇಲೆ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕೃತವಾಗಿಡಲು ಅಭ್ಯಾಸ ಮಾಡಲಾಗುತ್ತದೆ. ಕಾಲಾಂತರದಲ್ಲಿ, ಇದು ಮುಂದಿನ ಹಂತದ ವೈರಾಗ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ..
"ಯಾತಮಾನ" (ಮೊದಲ ಹಂತ) ದಿಂದ "ವ್ಯತಿರೇಕ" (ಎರಡನೇ ಹಂತ)ದ ವರೆಗೆ ಜಿಗಿತವು ಚಿಕ್ಕದಾಗಿರುತ್ತದೆ, ಆದರೆ ಮುಂದಿನ "ಏಕೇಂದ್ರಿಯ" (ಮೂರನೇ ಹಂತ)ಕ್ಕೆ ತಲುಪಲು ಒಂದು ದೊಡ್ಡ ನೆಗೆತವೇ ಅಗತ್ಯವಿರುತ್ತದೆ.
ಪರಮಾತ್ಮನ ಸರ್ವವ್ಯಾಪ್ತಿತ್ವವನ್ನು ವೀಕ್ಷಿಸುವ ದೈನಂದಿನ ಧ್ಯಾನದ ಅಭ್ಯಾಸವನ್ನು ನೀವು ಅಳವಡಿಸಿಕೊಳ್ಳಬಹುದು ಮತ್ತು ಈ ಪ್ರಕ್ರಿಯೆಯಲ್ಲಿ ನಿಮ್ಮ ಎಲ್ಲಾ ಕ್ರಿಯೆಗಳನ್ನು ಸರ್ವಶಕ್ತನಿಗೆ ಸಲ್ಲಿಸಬಹುದು. ಈ ಅಭ್ಯಾಸವು ಕಾಲಾಂತರದಲ್ಲಿ "ಏಕೇಂದ್ರಿಯ" ಹಂತದ ವೈರಾಗ್ಯವಾಗಿ ಪ್ರಕಟವಾಗುತ್ತದೆ.
ನಮ್ಮ ಮುಂದಿನ ಬರಹದಲ್ಲಿ, ನಾವು ವೈರಾಗ್ಯದ ನಾಲ್ಕನೇ ಹಂತವಾದ "ವಶೀಕಾರ"ವನ್ನು ಕುರಿತು ಚರ್ಚಿಸುತ್ತೇವೆ.
ಮಧ್ವೇಶ ಕೆ
ವೇದಿಕ್ ಟ್ರೈಬ್
—
4. ವಶೀಕಾರ
ಮೂರನೆಯ ಹಂತವಾದ ಏಕೇಂದ್ರಿಯದಲ್ಲಿ, ಮನಸ್ಸು ಲೌಕಿಕ ವ್ಯವಹಾರಗಳ ಕಡೆಗೆ ಓಲಾಡುವುದನ್ನು ನಿಲ್ಲಿಸಿತು ಮತ್ತು ಮುಕ್ತಿಯ ವಿಷಯದ ಮೇಲೆ ಕೇಂದ್ರೀಕೃತವಾಯಿತು. ಆದರೆ ಪ್ರಪಂಚದೊಂದಿಗಿನ ವ್ಯವಹಾರಗಳು ಮುಂದುವರಿದಿತ್ತು ಮತ್ತು ಅನೇಕ ಸಾತ್ವಿಕವಾದ ಪ್ರಾಪಂಚಿಕ ಆಸಕ್ತಿಗಳನ್ನು ಉಳಿಸಿಕೊಳ್ಳಲಾಗಿತ್ತು.
ನಾಲ್ಕನೆಯ ಹಂತವಾದ "ವಶೀಕಾರ"ದಲ್ಲಿ, ಪರಮಾತ್ಮನನ್ನು ಅಂತಃಕರಣದಲ್ಲಿ ನೇರವಾಗಿ ಗಮನಿಸುವ ಕಾರಣ ಮನಸ್ಸು ಪ್ರಪಂಚದ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ (ಮನೋಲಯವಾಗುತ್ತದೆ).
ಭಗವದ್ಗೀತೆಯಲ್ಲಿ, ಕೃಷ್ಣನು ಹೇಳುತ್ತಾನೆ "ಒಮ್ಮೆ ಸರ್ವಶಕ್ತನನ್ನು ಅಂತಃಕರಣದಲ್ಲಿ ನೇರವಾಗಿ ಗಮನಿಸಿದ ನಂತರ ಎಲ್ಲಾ ಇಂದ್ರಿಯಗಳ ಮತ್ತು ಮನಸ್ಸಿನ ಆಸಕ್ತಿಗಳು ಕಳೆದುಹೋಗುತ್ತವೆ". (2.59)
ಈ ಹಂತದಲ್ಲಿ ಭೌತಿಕ ದೇಹ ಮತ್ತು ಪ್ರಪಂಚವು ಪ್ರಾರಬ್ದ ಕರ್ಮಗಳನ್ನು ಸೇವಿಸುವುದಕ್ಕಾಗಿ ಮಾತ್ರ ಸೀಮಿತವಾಗಿರುತ್ತದೆ. ಮನಸ್ಸು ಸಂಪೂರ್ಣವಾಗಿ ಲಯವಾಗಿ ಆತ್ಮವು ಪರಮಾತ್ಮನಲ್ಲಿ ನೆಲೆಸುವುದರಿಂದ, ಅದನ್ನು "ಜೀವನ್ಮುಕ್ತ" (ಸಾಮಾನ್ಯರ ಮಧ್ಯೆ ಇರುವ ಮುಕ್ತ ಜೀವ) ಎಂದು ಕರೆಯಲಾಗುತ್ತದೆ. ಯೋಗಶಾಸ್ತ್ರದಲ್ಲಿ ಅಂತಹ ಜೀವವನ್ನು "ತೀವ್ರ ಸಂವೇಗಾನಂ ಅಧಿಮಾತ್ರತಮಾನ್" ಎಂದು ಕರೆಯಲಾಗುತ್ತದೆ.
ಆರಂಭಿಕರು ಈ ಹಂತವು ಗ್ರಹಿಸಲಾರರು. ಅದೇ ಗ್ರಂಥಗಳು, ಸಂಪ್ರದಾಯಗಳು ಮತ್ತು ಜಾನಪದವು ಸಾಮಾನ್ಯರಲ್ಲಿದ್ದ ಅಂತಹ ಜೀವನ್ಮುಕ್ತರನ್ನು ದಾಖಲಿಸುತ್ತದೆ. ಇದರಿಂದ ಆರಂಭಿಕರು ತಮ್ಮ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಇಂತಹಾ ಜೀವನ್ಮುಕ್ತರ ಜೀವನವನ್ನು ಆದರ್ಶವಾಗಿ ಸ್ವೀಕರಿಸಬಹುದು.
ನಿಮ್ಮ ಸಂಪ್ರದಾಯದಲ್ಲಿ ಅಂತಹ ವ್ಯಕ್ತಿಗಳನ್ನು ಧ್ಯಾನಿಸುವ ದೈನಂದಿನ ಅಭ್ಯಾಸವನ್ನು ನೀವು ಅಳವಡಿಸಿಕೊಳ್ಳಬಹುದು ಮತ್ತು ನಿಮ್ಮ ಆಧ್ಯಾತ್ಮಿಕ ಅಭ್ಯಾಸವನ್ನು ಅವನ / ಅವಳಿಗೆ ಅನುಗುಣವಾಗಿ ರೂಪಿಸಬಹುದು. ಈ ಅಭ್ಯಾಸವು ಸಂಸ್ಕಾರವಾಗಿ ಕಾಲಾಂತರದಲ್ಲಿ ಪ್ರಕಟವಾಗುತ್ತದೆ ಮತ್ತು ಅನೇಕ ಜೀವಿತಾವಧಿಯಲ್ಲಿ ನಿಮ್ಮ ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ.
ವೇದಿಕ್ ಟ್ರೈಬ್ ಗೆ ಈ ನಾಲ್ಕು ಹಂತಗಳ ವೈರಾಗ್ಯದ ಪರಿಚಯಾತ್ಮಕ ಸರಣಿಯನ್ನು ನಿಮಗೆ ತಂದಿದ್ದಕ್ಕಾಗಿ ಸಂತೋಷವಾಗಿದೆ.
ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.
ಒಳ್ಳೆಯದಾಗಲಿ.
ಮಧ್ವೇಶ ಕೆ
ವೇದಿಕ್ ಟ್ರೈಬ್
No comments:
Post a Comment