Six meditation techniques directly from Yoga Sutras - for beginners

Thursday, January 18, 2024

ಜೀವಾತ್ಮದ ನಾಲ್ಕು ದೇಹಗಳು

ಜೀವಾತ್ಮದ ನಾಲ್ಕು ದೇಹಗಳು

ಪರಿಚಯ

ವೈದಿಕ ತತ್ತ್ವಶಾಸ್ತ್ರದಲ್ಲಿ, ಜೀವಾತ್ಮವನ್ನು ಪರಮಾತ್ಮನ ಪ್ರತಿಬಿಂಬವೆಂದು ಪರಿಗಣಿಸಲಾಗುತ್ತದೆ. ಒಂದು ರೂಪಕವಾಗಿ, ಪರಮಾತ್ಮನ ಗುಣಗಳು ಸಾಗರದಂತೆ, ಜೀವಾತ್ಮ ಗುಣಲಕ್ಷಣಗಳು ನೀರಿನ ಹನಿಯಂತೆ ಎನ್ನಲಾಗುತ್ತದೆ.

ಜೀವಾತ್ಮದ ಸ್ವರೂಪ ದೇಹವು ನಾಲ್ಕು ಅಲೌಕಿಕ ಲಕ್ಷಣಗಳನ್ನು ಹೊಂದಿದೆ; ಅಂದರೆ “ಸತ್” (ಸಂಪೂರ್ಣತೆ), “ಚಿತ್” (ಜಾಗೃತಿ), “ಆನಂದ” (ಆನಂದ) ಮತ್ತು “ಆತ್ಮ” (ದೈವಿಕತೆ). 

ಆದಾಗ್ಯೂ, ಸ್ವರೂಪ ದೇಹದ ಈ ಅಲೌಕಿಕ ಗುಣಲಕ್ಷಣಗಳು ಮೂರು ನೈಸರ್ಗಿಕ ಕಾಯಗಳ ಪದರಗಳಿಂದ ಮುಚ್ಚಲ್ಪಟ್ಟಿವೆ. ಆದ್ದರಿಂದ ಜೀವಾತ್ಮವು ತನ್ನ ನಾಲ್ಕು ದೇಹಗಳೊಂದಿಗೆ ಪ್ರಪಂಚದೊಂದಿಗೆ ಸಂವಹನ ನಡೆಸುತ್ತದೆ: (1) "ಸ್ವರೂಪ ದೇಹ" (ಮೂಲ ದೇಹ); (2) ಸ್ವರೂಪ ದೇಹವನ್ನು ಆವರಿಸಿರುವ "ಲಿಂಗ ದೇಹ" (ಕಾರಣ ದೇಹ); (3) ಲಿಂಗ ದೇಹವನ್ನು ಆವರಿಸಿರುವ "ಅನಿರುದ್ಧ ದೇಹ" (ಮಾನಸಿಕ ದೇಹ); ಮತ್ತು (4) ಅನಿರುದ್ಧ ದೇಹವನ್ನು ಆವರಿಸಿರುವ "ಸ್ಥೂಲ ದೇಹ" (ಭೌತಿಕ ದೇಹ).

ಕಾರಣ, ಮಾನಸಿಕ ಮತ್ತು ಭೌತಿಕ ದೇಹಗಳು ಸ್ವರೂಪ ದೇಹದ ಆಧ್ಯಾತ್ಮಿಕ ಬೆಳವಣಿಗೆಗೆ ಅಡ್ಡಿ ಮತ್ತು ಸಾಧನ ಎರಡೂ ಆಗಿವೆ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಂಡಿರುವವರಿಗೆ ಈ ದೇಹಗಳು ಅಡ್ಡಿಯಾಗುತ್ತವೆ ಮತ್ತು ಅಂತರ್ಮುಖಿಯಾಗಿ ಪ್ರಯಾಣಿಸುವವರಿಗೆ ಈ ದೇಹಗಳು ಆಧ್ಯಾತ್ಮಿಕ ಪ್ರಗತಿಯ ಸಾಧನಗಳಾಗಿವೆ.

ವೇದಾಂತದ ಸಂಪೂರ್ಣ ಉದ್ದೇಶವು ಹೇಳಲಾದ ಮೂರು ನೈಸರ್ಗಿಕ ದೇಹಗಳನ್ನು ಮೀರುವುದಾಗಿದೆ ಮತ್ತು ಇದರಿಂದ ಜೀವಾತ್ಮದ ಸ್ವರೂಪ ದೇಹವು ಪರಮಾತ್ಮನನ್ನು ಸೇರುವುದಾಗಿದೆ.

ವೇದಿಕ್ ಟ್ರೈಬ್ ಗೆ "ಜೀವಾತ್ಮದ ನಾಲ್ಕು ದೇಹಗಳು" ಎಂಬ ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ.

ನೀವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಉಂಟುಮಾಡುವುದು ನಮ್ಮ ಉದ್ದೇಶವಾಗಿದೆ 

ನಮ್ಮ ಮುಂದಿನ ಬರಹದಲ್ಲಿ, ನಾವು ಸ್ವರೂಪ ದೇಹವನ್ನು ಪರಿಚಯಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

1. ಸ್ವರೂಪ ದೇಹ (ಮೂಲ ದೇಹ)

ವೈದಿಕ ತತ್ತ್ವಶಾಸ್ತ್ರದಲ್ಲಿ, ಜೀವಾತ್ಮನ ಸ್ವರೂಪ ದೇಹವು ಪರಮಾತ್ಮನ ಪ್ರತಿಬಿಂಬವಾಗಿದೆ. 

ಈ ಸ್ವರೂಪ ದೇಹವು “ಸತ್” (ಸಂಪೂರ್ಣತೆ), “ಚಿತ್” (ಜಾಗೃತಿ), “ಆನಂದ” (ಆನಂದ) ಮತ್ತು “ಆತ್ಮ” (ದೈವಿಕತೆ)‌ ಎಂಬ ಗುಣಗಳನ್ನು ಒಳಗೊಂಡಿದೆ. ಪರಮಾತ್ಮನ ಅಂತಹ ಗುಣಲಕ್ಷಣಗಳು ಅಪರಿಮಿತವಾಗಿಯೂ ಮತ್ತು ಸ್ವತಂತ್ರವಾಗಿಯೂ ಇದ್ದರೆ, ಜೀವಾತ್ಮನದ್ದು ಸೀಮಿತವಾಯೂ ಮತ್ತು ಅಸ್ವತಂತ್ರವಾಗಿಯೂ ಇರುತ್ತದೆ.

ಜೀವಾತ್ಮದಲ್ಲಿ ಈ ಗುಣಲಕ್ಷಣಗಳು ಸೃಷ್ಟಿಗೆ ಬರುವ ಮೊದಲು ಸುಪ್ತವಾಗಿರುತ್ತವೆ. ಈ ಗುಣಲಕ್ಷಣಗಳನ್ನು ಜನ್ಮಾಂತರಗಳಲ್ಲಿ ಅಭಿವೃದ್ಧಿ ಪಡಿಸಿಕೊಳ್ಳವುದು ಸೃಷ್ಟಿಯ ಮುಖ್ಯ ಧ್ಯೇಯವಾಗಿದೆ; ಅಂದರೆ, ಜೀವಾತ್ಮನು ತನ್ನ ಸಂಪೂರ್ಣ ಅಸ್ತಿತ್ವವೆಂದು ಅರಿಯುವುದು; ಪೂರ್ಣ ಪ್ರಜ್ಞೆಯನ್ನು ತಲುಪುವುದು; ಸಂಪೂರ್ಣ ಆನಂದವನ್ನು ಸಾಧಿಸಿವುದು; ಮತ್ತು ದೈವತ್ವವನ್ನು ಸಿದ್ಧಿಸಿಕೊಳ್ಳುವುದು. ರೂಪಕವಾಗಿ, ವೈದಿಕ ತತ್ತ್ವಶಾಸ್ತ್ರದಲ್ಲಿ ಮರವಾಗುವ ಬೀಜದ ಸಾಮರ್ಥ್ಯವನ್ನು ಜೀವದ ಸಾಮರ್ಥ್ಯಕ್ಕೆ ಹೋಲಿಸಲಾಗುತ್ತದೆ

ಈ ಸ್ವರೂಪ ದೇಹದ ಗುಣಲಕ್ಷಣಗಳನ್ನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣನು ಮತ್ತಷ್ಟು ವಿವರಿಸಿದ್ದಾನೆ. ಅದು ಅವಿನಾಶಿಯಾದುದು, ಅಳೆಯಲಾಗದ್ದು, ಶಾಶ್ವತವಾದದ್ದು, ಅಮರವೂ, ವಯಸ್ಸಾಗದ್ದೂ, ಅದನ್ನು ಚೂರುಚೂರು ಮಾಡಲು ಅಥವಾ ಸುಡಲು ಅಥವಾ ಒಣಗಿಸಲು ಸಾಧ್ಯವಿಲ್ಲದ್ದೂ ... ಇತ್ಯಾದಿ ಎಂದು ಕೃಷ್ಣ ಹೇಳುತ್ತಾನೆ.

ನೀವು ಆಧ್ಯಾತ್ಮಿಕ ಅಭ್ಯಾಸದಲ್ಲಿ ಆರಂಭಿಕರಾಗಿದ್ದರೆ, ಭಗವದ್ಗೀತೆಯ ಎರಡನೇ ಅಧ್ಯಾಯ ಮತ್ತು ಮಾಂಡೂಕ್ಯ ಉಪನಿಷತ್ ಅನ್ನು ಅಧ್ಯಯನ ಮಾಡಲು ನಾವು ಶಿಫಾರಸು ಮಾಡುತ್ತೇವೆ. ಇದು ವೇದಾಂತ ಪ್ರಮೇಯಗಳ ಬಗ್ಗೆ ಉತ್ತಮ ಒಳನೋಟವನ್ನು ನೀಡುತ್ತದೆ ಮತ್ತು ನಿಮ್ಮ ಆಧ್ಯಾತ್ಮಿಕ ಅಭ್ಯಾಸದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ.

ಮುಂದಿನ ಬರಹದಲ್ಲಿ ನಾವು ಸ್ವರೂಪ ದೇಹ ವನ್ನು ಆವರಿಸಿರುವ ಲಿಂಗ ದೇಹವನ್ನು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


— 

2. ಲಿಂಗ ದೇಹ (ಕಾರಣ ದೇಹ)

ವೈದಿಕ ತತ್ತ್ವಶಾಸ್ತ್ರದಲ್ಲಿ, ಬೀಜವನ್ನು ಜೀವಾತ್ಮದ ಸಾಮರ್ಥ್ಯಕ್ಕೆ ರೂಪಕವಾಗಿ ಬಳಸಲಾಗುತ್ತದೆ. ಒಂದು ಬೀಜವು ಸಾಮಾನ್ಯವಾಗಿ ಸೀಡ್-ಕೋಟ್ (ಟೆಸ್ಟಾ) ನೊಂದಿಗೆ ಬರುತ್ತದೆ ಮತ್ತು ಈ ಟೆಸ್ಟಾ ಬೀಜವನ್ನು ಆವರಿಸುತ್ತದೆ. 

ಲಿಂಗ ದೇಹವನ್ನು ಈ ಟೆಸ್ಟಾಗೆ ಹೋಲಿಸಬಹುದು; ಅಂದರೆ ಲಿಂಗ ದೇಹವು ಸ್ವರೂಪ ದೇಹವನ್ನು ಟೆಸ್ಟಾದಂತೆ ಆವರಿಸಿರುತ್ತದೆ.

ಬೀಜವನ್ನು ಟೆಸ್ಟಾದಲ್ಲಿ ಮುಚ್ಚಿದ್ದಾಗ, ಅದನ್ನು ಸಂರಕ್ಷಿಸಬಹುದು ಮತ್ತು ಎಲ್ಲೂ ಕೊಂಡೊಯ್ಯಬಹುದು. ಸೂಕ್ತವಾದ ಸ್ಥಿತಿಯಲ್ಲಿ, ಬೀಜವು ಟೆಸ್ಟಾದಿಂದ ಹೊರಬರುವ ಮೂಲಕ ಮೊಳಕೆಯೊಡೆಯುತ್ತದೆ. ಪರಿಸ್ಥಿತಿಯು ಸೂಕ್ತವಾಗುವ ತನಕ, ಟೆಸ್ಟಾ ಬೀಜವನ್ನು ಸಂರಕ್ಷಿಸುತ್ತದೆ. ಅಂತೆಯೇ, ಸೃಷ್ಟಿಯ ಕೊನೆಯಲ್ಲಿ, ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಜೀವಾತ್ಮದ ಲಿಂಗ ದೇಹ ಭಂಗವಾಗುತ್ತದೆ, ಆದ್ದರಿಂದ ಸ್ವರೂಪ ದೇಹ ಪರಮಾತ್ಮನನ್ನು ಸೇರುತ್ತದೆ. ಅಲ್ಲಿಯವರೆಗೆ ಲಿಂಗ ದೇಹವು ಜೀವಾತ್ಮನ ಜನ್ಮಾಂತರಗಳಿಗೆ ಕಾರಣವಾಗುತ್ತದೆ. ಇದು ಜೀವಾತ್ಮಕ್ಕೆ ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳಲು ಸಾಧನವಾಗುತ್ತದೆ.

ಬೀಜವು ಬೀಜದ ಹೊದಿಕೆಯೊಂದಿಗೆ ಹುಟ್ಟಿ ನಂತರ ಅದರಿಂದ ಹೊರಬರುವಂತೆ, ಜೀವಾತ್ಮವು ಲಿಂಗದೇಹದೊಂದಿಗೆ ಸೃಷ್ಟಿಗೆ ತರಲ್ಪಡುತ್ತದೆ ಮತ್ತು ಪೂರ್ಣ ಬೆಳವಣಿಗೆಯ ನಂತರ ಅದರಿಂದ ಹೊರಬರುತ್ತದೆ.

ನೀವು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ನೀವು ಶ್ರೀ ವಿಷ್ಣುತೀರ್ಥ (ಮದನೂರು) ಅವರ "ಷೋಡಶಿ" ಅನ್ನು ಓದಬಹುದು.

ನಮ್ಮ ಮುಂದಿನ ಬರಹದಲ್ಲಿ ನಾವು ಲಿಂಗ ದೇಹವನ್ನು ಆವರಿಸಿರುವ ಅನಿರುದ್ಧ ದೇಹವನ್ನು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

—- 

3. ಅನಿರುದ್ಧ ದೇಹ (ಮಾನಸಿಕ ದೇಹ)

ವೈದಿಕ ತತ್ತ್ವಶಾಸ್ತ್ರದಲ್ಲಿ, "ಮನಸ್ಸು" ಮೂಲಪೃಕೃತಿಯ ಅಭಿವ್ಯಕ್ತಿಯಾಗಿದೆ. ಆದ್ದರಿಂದ, ಮನಸ್ಸು ಭೌತಿಕ ಪ್ರಪಂಚದ ಎಲ್ಲಾ ಸ್ಥರಗಳಲ್ಲೂ ಕಾರ್ಯನಿರ್ವಹಿಸುತ್ತದೆ. ನಿರ್ಜೀವ ವಸ್ತುಗಳಲ್ಲಿ, ಇದು ಸುಪ್ತವಾಗಿ ಕಾರ್ಯನಿರ್ವಹಿಸುತ್ತದೆ; ಜೀವಿಗಳಲ್ಲಿ, ಇದು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತದೆ; ಮತ್ತು ಮಾನವರಲ್ಲಿ ಇದು ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತದೆ.

ಅನಿರುದ್ಧ ದೇಹ ಎಂಬುದು ಜೀವಿಗಳ ಮಾನಸಿಕ ದೇಹವಾಗಿದೆ. ಚಿಂತನೆಯ ಶಕ್ತಿ, ಆತ್ಮಾವಲೋಕನ, ಧ್ಯಾನ ... ಇತ್ಯಾದಿ ಅನಿರುದ್ಧ ದೇಹದ ಕಾರ್ಯಾಚರಣೆಯ ನೇರ ಪರಿಣಾಮವಾಗಿದೆ. ಇದರಿಂದ ಜೀವಾತ್ಮಕ್ಕೆ ತನ್ನ ಮಾನಸಿಕ ಕ್ರಿಯೆಗಳನ್ನು ನಡೆಸಲು ಸಾಧ್ಯವಾಗುತ್ತದೆ.

ಲಿಂಗ ದೇಹದಂತೆ, ಇದು ಪ್ರಾರಂಭದಿಂದಲೂ ಜೀವಾತ್ಮಕ್ಕೆ ಅಂಟಿಕೊಂಡಿರುವುದಿಲ್ಲ. ಬದಲಿಗೆ ಅದು ಜನ್ಮಾಂತರಗಳಲ್ಲಿ ಜೀವಾತ್ಮಕ್ಕೆ ಒದಗಿಬರುತ್ತದೆ. ಈ ಅನಿರುದ್ಧ ದೇಹದ ಕಾರ್ಯಾಚರಣೆಯ ಮಟ್ಟವು ಅದು ಪಡೆಯುವ ಭೌತಿಕ ದೇಹದ ಸ್ವರೂಪವನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ.

ಜೀವಾತ್ಮವು ಸಂಪೂರ್ಣವಾಗಿ ವಿಕಾಸ ಹೊಂದುತ್ತಿದ್ದಂತೆ, ಮನಸ್ಸು ಲಯವಾಗುತ್ತದೆ ಮತ್ತು ಅನಿರುದ್ಧ ದೇಹದ ಕಾರ್ಯಾಚರಣೆಗಳು ಭೌತಿಕ ಮಟ್ಟದಲ್ಲಿ ಕನಿಷ್ಠವಾಗುತ್ತವೆ. ಜೀವಾತ್ಮವು ಮುಕ್ತವಾದಾಗ ಇದು ಅಂತಿಮವಾಗಿ ಪೃಕೃತಿಯಲ್ಲಿ ಲಯವಾಗುತ್ತದೆ.

ನೀವು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ನೀವು ಶ್ರೀ ವಿಷ್ಣುತೀರ್ಥ (ಮದನೂರು) ಅವರ "ಷೋಡಶಿ" ಅನ್ನು ಓದಬಹುದು.

ನಮ್ಮ ಮುಂದಿನ ಬರಹದಲ್ಲಿ ನಾವು ಅನಿರುದ್ಧ ದೇಹವನ್ನು ಆವರಿಸಿರುವ ಸ್ಥೂಲ ದೇಹವನ್ನು ಚರ್ಚಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


—- 

4. ಸ್ಥೂಲ ದೇಹ (ಭೌತಿಕ ದೇಹ)

ವೈದಿಕ ತತ್ತ್ವಶಾಸ್ತ್ರದಲ್ಲಿ, "ಜೀವಾತ್ಮ" ದ ಭೌತಿಕ ದೇಹವು ನೈಸರ್ಗಿಕ ಅಂಶಗಳಿಂದ ಮಾಡಲ್ಪಟ್ಟಿದೆ. ಈ ನೈಸರ್ಗಿಕ ಅಂಶಗಳನ್ನು "ಪಂಚ ಭೂತ" ಎಂದು ವಿಂಗಡಿಸಲಾಗಿದೆ (ಅಂದರೆ, ಭೂಮಿ, ನೀರು, ಗಾಳಿ, ಆಕಾಶ ಮತ್ತು ಬೆಂಕಿ / ಪ್ರಕಾಶ).

ಮಾಂಡೂಕ್ಯ ಉಪನಿಷತ್ತಿನಲ್ಲಿ, ಭೌತಿಕ ದೇಹವನ್ನು ಎರಡು ಪಕ್ಷಿಗಳು ವಾಸಿಸುವ ಮರಕ್ಕೆ ಹೋಲಿಸಲಾಗುತ್ತದೆ: ಜೀವಾತ್ಮ ಮತ್ತು ಪರಮಾತ್ಮ. ಭಗವದ್ಗೀತೆಯಲ್ಲಿ, ಭೌತಿಕ ದೇಹವನ್ನು "ಕ್ಷೇತ್ರ" (ಜೀವಾತ್ಮ ವಾಸಿಸುವ ಸ್ಥಳ) ಎಂದು ಕರೆಯಲಾಗುತ್ತದೆ ಮತ್ತು ಸರ್ವಶಕ್ತನನ್ನು "ಕ್ಷೇತ್ರಜ್ಞ" (ಈ ಕ್ಷೇತ್ರದ ಯಜಮಾನ) ಎಂದು ಕರೆಯಲಾಗುತ್ತದೆ (ಅಧ್ಯಾಯ 13 ನೋಡಿ).

ವೈದಿಕ ಸಂಪ್ರದಾಯದಲ್ಲಿ, "ಅರ್ಜುನ" ರಥದಲ್ಲಿ ಅಂದರೆ ದೇಹದಲ್ಲಿ ಸಂಚಾರ ಮಾಡುವ ಜೀವಾತ್ಮ ಎಂದು ಮತ್ತು ಅದನ್ನು ನಿರ್ದೇಶಿಸುವ ಸರ್ವಶಕ್ತ "ಕೃಷ್ಣ" ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಭೌತಿಕ ದೇಹವನ್ನು ಜೀವಾತ್ಮವು ಪರಮಾತ್ಮನನ್ನು ಪೂಜಿಸಬೇಕಾದ ದೇವಾಲಯವೆಂದು ಪರಿಗಣಿಸಲಾಗುತ್ತದೆ.

ಆಯುರ್ವೇದ ಮತ್ತು ಹಠಯೋಗ ಶಾಸ್ತ್ರಗಳು ಸಂಪೂರ್ಣ ಭೌತಿಕ ದೇಹದ ಆರೋಗ್ಯಕರ ನಿರ್ವಹಣೆಗೆ ಸಮರ್ಪಿಸಲಾಗಿದೆ. ಈ ಭೌತಿಕ ದೇಹವನ್ನು ಆಹಾರದ ಮೂಲಕ ಪೋಷಿಸುವುದು "ವೈಶ್ವಾನರ ಯಜ್ಞ" ಎಂದು ಪರಿಗಣಿಸಲಾಗುತ್ತದೆ. ವೇದಾಂತದಲ್ಲಿ ಅಂತಿಮವಾಗಿ ಸರ್ವಶಕ್ತನು ಈ ಭೌತಿಕ ದೇಹದ ಮೂಲಕ ಜೀವಾತ್ಮದ ಎಲ್ಲಾ ಅನುಭವಗಳನ್ನೂ ಸ್ವೀಕರಿಸುತ್ತಾನೆ ಎಂಬ ಉಪಾಸನೆ ಮಾಡಲಾಗುತ್ತದೆ.

ನೀವು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ನೀವು ಶ್ರೀ ಚಂದ್ರ ವಾಸು ಅವರ "ಘೇರಾಂಡಾ ಸಂಹಿತಾ" ಓದಬಹುದು.

ವೇದಿಕ್ ಟ್ರೈಬ್ ಗೆ "ಜೀವಾತ್ಮದ ನಾಲ್ಕು ದೇಹಗಳು" ಎಂಬ ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ.

ನೀವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಉಂಟುಮಾಡುವುದು ನಮ್ಮ ಉದ್ದೇಶವಾಗಿದೆ 

ಒಳ್ಳೆಯದಾಗಲಿ.

ಮಧ್ವೇಶ ಕೆ
ವೇದಿಕ್ ಟ್ರೈಬ್



No comments:

Post a Comment