Six meditation techniques directly from Yoga Sutras - for beginners

Saturday, February 10, 2024

ಭಗವದ್ಗೀತೆಯಿಂದ ಧ್ಯಾನಕ್ಕೆ ಬೇಕಾದ ಏಳು ಪ್ರಕ್ರಿಯೆಗಳು


ಪರಿಚಯ

ಭಗವದ್ಗೀತೆಯ ಅಧ್ಯಾಯ 3, 4 ಮತ್ತು 5 ರಲ್ಲಿ, ಶ್ರೀಕೃಷ್ಣನು ಕರ್ಮಯೋಗಕ್ಕೆ ಮತ್ತು ಸಕ್ರಿಯ ಸನ್ಯಾಸಕ್ಕೆ ಒತ್ತು ನೀಡುತ್ತಾನೆ. ಅಂದರೆ, ಕಾರ್ಯವನ್ನು ಸಮರ್ಥವಾಗಿ ಮತ್ತು ತೀವ್ರವಾಗಿ ನಿರ್ವಹಿಸುವುದು ಮತ್ತು ಫಲಕ್ಕೆ ಅಂಟು ಕೊಳ್ಳದೇ ಇರುವುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಗುರಿ-ಆಧಾರಿತ ಅಂಟು-ಕರ್ಮಕ್ಕಿಂತಾ ಪ್ರಕ್ರಿಯೆ-ಆಧಾರಿತ ನಿರ್ಲೇಪ-ಕರ್ಮವನ್ನು ಶಿಫಾರಸು ಮಾಡಲಾಗಿದೆ. 

ಒಬ್ಬನು ಸ್ವಲ್ಪ ಮಟ್ಟಿಗೆ ಕರ್ಮ-ಯೋಗವನ್ನು ಸಾಧಿಸಿದರೂ, ಮುಂದಿನ ಪ್ರಗತಿಗೆ ಮನಸ್ಸು ದೊಡ್ಡ ಪ್ರತಿಬಂಧಕವಾಗಿ ಉಳಿಯುತ್ತದೆ. ಆದ್ದರಿಂದ, ಮುಂದಿನ ಅಧ್ಯಾಯದಲ್ಲಿ (6 ನೇ), ಶ್ರೀಕೃಷ್ಣನು ಮನಸ್ಸನ್ನು ನಿಯಂತ್ರಿಸುವ ಧ್ಯಾನಪ್ರಕ್ರಿಯೆಯನ್ನು ಹೇಳುತ್ತಾನೆ.

ವೈದಿಕ ಸಂಪ್ರದಾಯದಲ್ಲಿ, ಭಗವದ್ಗೀತೆಯ ಆರನೇ ಅಧ್ಯಾಯವನ್ನು "ಧ್ಯಾನ ಯೋಗ" ಎಂದು ಕರೆಯಲಾಗುತ್ತದೆ. "ಧ್ಯಾನ" ಎಂಬ ಪದವು "ಧ್ಯಾ" ದಿಂದ ಬಂದಿದೆ. ಇದರರ್ಥ ಯೋಚಿಸುವುದು, ಧ್ಯಾನಿಸುವುದು ಅಥವಾ ನಿಧಿಧ್ಯಾನಿಸುವುದು. ಇವು ಮನಸ್ಸಿನ ಕೇಂದ್ರೀಕೃತವಾದ ಸ್ಥಿತಿಗಳಾಗಿವೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ - ಮನಸ್ಸು ಶತ್ರುವೂ ಹೌದು, ಮಿತ್ರನೂ ಹೌದು. ಮನಸ್ಸನ್ನು ಸ್ನೇಹಿತನನ್ನಾಗಿ ಮಾಡಲು - ಅವನು ಧ್ಯಾನದ ಉದ್ದೇಶಪೂರ್ವಕ ಅಭ್ಯಾಸವನ್ನು ಸೂಚಿಸುತ್ತಾನೆ (ಶ್ಲೋಕಗಳು 6.10 ರಿಂದ 6.15 ರವರೆಗೆ.)

ಉದ್ದೇಶಪೂರ್ವಕ ಅಭ್ಯಾಸವನ್ನು ಸೂಚಿಸಲು ಕಾರಣ - ಮನಸ್ಸನ್ನು ನಿಯಂತ್ರಿಸುವುದು ಸುಲಭವಲ್ಲ. ಧ್ಯಾನ ಮಾಡುವ ನಮ್ಮ ನಿರ್ಣಯವನ್ನು ತಳ್ಳಿಕೊಂಡು, ಮನಸ್ಸು ಸುಲಭವಾಗಿ ದೂರ ಸರಿಯುತ್ತದೆ. ಆದ್ದರಿಂದ, ಕೃಷ್ಣ ಈ ಏಳು ಪ್ರಕ್ರಿಯೆಗಳುಳ್ಳ ಧ್ಯಾನವನ್ನು ಸೂಚಿಸುತ್ತಾನೆ: (1) ಏಕಾಂತ, (2) ಪವಿತ್ರ ಸ್ಥಳ, (3) ಬ್ರಹ್ಮಚರ್ಯದ ಪ್ರತಿಜ್ಞೆ, (4) ಸೂಕ್ತವಾದ ಆಸನ, (5) ಆರಾಮದಾಯಕ ಭಂಗಿ, (6) ಸ್ಥಿರ ನೋಟ ಮತ್ತು (7) ಒಂದು ಮೊನಚಾದ ಏಕಾಗ್ರತೆ.

ಭಗವಾನ್ ಕೃಷ್ಣ ಹೇಳುತ್ತಾನೆ - ಧ್ಯಾನದಲ್ಲಿನ ಶಾಂತತೆಯು ಕರ್ಮಯೋಗದ ಹಂತವನ್ನು ದಾಟುವಲ್ಲಿ ಸಾಧಕನಿಗೆ ಸಹಾಯ ಮಾಡುತ್ತದೆ (6.3). 

ವೇದಿಕ್ ಟ್ರೈಬ್ ಗೆ "ಭಗವದ್ಗೀತೆಯಿಂದ ಧ್ಯಾನಕ್ಕೆ ಬೇಕಾದ ಏಳು ಪ್ರಕ್ರಿಯೆಗಳು" ಎಂಬ ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ .

ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಅಭ್ಯಾಸದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ನಿಮ್ಮನ್ನು ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ.

ನಮ್ಮ ಮುಂದಿನ ಬರಹದಲ್ಲಿ, ನಾವು ಮೊದಲ ಹಂತದ "ಏಕಾಂತ" ವನ್ನು ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

1. ಏಕಾಂತ

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣ ಹೇಳುತ್ತಾನೆ - ಧ್ಯಾನದಲ್ಲಿ ಶಾಂತಿಯನ್ನು ಸಾಧಿಸಲು ಬಯಸುವವರು ಏಕಾಂತದಲ್ಲಿ ನೆಲೆಸಬೇಕು. (6.10).

ಜನಪ್ರಿಯ ಸಂಸ್ಕೃತಿಯಲ್ಲಿ, ಏಕಾಂತದಲ್ಲಿ ವಾಸಿಸುವುದನ್ನು ಮನೋಹರವಾಗಿ ಚಿತ್ರಿಸಲಾಗುತ್ತದೆ ಮತ್ತು ಇದು ಪ್ರಬುದ್ಧರಿಗೆ ಆದರ್ಶ ಜೀವನ ಎಂಬುವಂತೆ ಪ್ರಸ್ತುತಪಡಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ, ಸಾಮಾಜಿಕ ಸೌಕರ್ಯಗಳಿಗೆ ಒಗ್ಗಿಕೊಂಡಿರುವ ವ್ಯಕ್ತಿಗೆ ಏಕಾಂತದಲ್ಲಿ ಬದುಕುವುದು ಬಹಳ ಕಷ್ಟ. 

ಏಕಾಂತವು ಇಂದ್ರಿಯಗಳ ಎಲ್ಲಾ ಬಾಹ್ಯ ಸಂಪಕ್ರಗಳನ್ನೂ ತಕ್ಷಣವೇ ತೆಗೆದುಹಾಕುತ್ತದೆ, ಹಾಗಾಗಿ ಹಾಯಾಗಿ ಕುಳಿತು ಧ್ಯಾನ ಮಾಡಲು ಇದೇ ಸೂಕ್ತ ಮಾರ್ಗವೆಂದು ತೋರುತ್ತದೆ. ಆದರೆ ವಾಸ್ತವವಾಗಿ, ಬಾಹ್ಯ ಸಂಪರ್ಕಗಳ ಅನುಪಸ್ಥಿತಿಯಲ್ಲಿ ಮನಸ್ಸು ಅತಿರೇಕದ ಹೊಯ್ದಾಟಕ್ಕೆ ಒಳಪಟ್ಟು ಧ್ಯಾನವು ಅಸಾಧ್ಯವಾಗುತ್ತದೆ.

ಆದ್ದರಿಂದ, ಸಾಧಕರು ತಮ್ಮ ಮನಸ್ಸಿಗೆ ಏಕಾಂತಕ್ಕೆ ಒಗ್ಗಿಕೊಳ್ಳಲು ಸಮಯಾವಕಾಶ ನೀಡಬೇಕು ಮತ್ತು ನಂತರ ಧ್ಯಾನದ ಅಭ್ಯಾಸಗಳನ್ನು ಪ್ರಾರಂಭಿಸಬೇಕು. ಪ್ರಾರಂಭಿಸಲು ಉತ್ತಮ ಮಾರ್ಗವೆಂದರೆ ನಾಗರಿಕತೆಯಿಂದ ದೂರವಿರುವ ಆಶ್ರಮ ದಲ್ಲಿ 5-10 ದಿನಗಳ ಕಾಲ ವಾಸಿಸುವುದು ಮತ್ತು ಮೌನದ ಪ್ರತಿಜ್ಞೆ ಮಾಡುವುದು. ಇದರ ಉದ್ದೇಶವು ಏಕಾಂತಕ್ಕೆ ಒಗ್ಗಿಕೊಳ್ಳುವುದು ಮತ್ತು ಧ್ಯಾನಸ್ಥ ಮನಸ್ಥಿತಿಯನ್ನು ಸಾಧಿಸುವುದು ಆಗಿರಬೇಕು.

ಮನಸ್ಸು ಏಕಾಂತಕ್ಕೆ ಒಗ್ಗಿಕೊಂಡ ನಂತರ, ಸಾಧಕರು ಮುಂದಿನ ಹಂತಕ್ಕೆ ಹೋಗಬಹುದು; ಅದೆ - ಪವಿತ್ರ ಸ್ಥಳವನ್ನು ರಚಿಸುವುದು. ನಮ್ಮ ಮುಂದಿನ ಬರಹದಲ್ಲಿ ನಾವು ಅದನ್ನೇ ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್
 
— 

2. ಪವಿತ್ರ ಸ್ಥಳವನ್ನು ರಚಿಸುವುದು

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣ ಹೇಳುತ್ತಾನೆ - ಧ್ಯಾನ ಮಾಡಲು, ಒಬ್ಬನು ಪವಿತ್ರವಾದ ಸ್ಥಳದಲ್ಲಿ ಆಸನವನ್ನು ಸಿದ್ಧಪಡಿಸಬೇಕು (“ಶುಚೌ ದೇಶೇ”) (6.11).

"ಶೌಚ" ಎಂಬ ಪದವು ಸ್ವಚ್ಛತೆ, ಸ್ಪಷ್ಟತೆ ಮತ್ತು ಶುದ್ಧತೆಯನ್ನು ಸೂಚಿಸುತ್ತದೆ. 

ಒಂದು ಸ್ಥಳದ ಶುಚಿತ್ವವನ್ನು ಭೌತಿಕವಾಗಿ ಸ್ವಚ್ಛಗೊಳಿಸುವ ಮೂಲಕ ಸಾಧಿಸಬಹುದು; ವಾಕ್ ಶಕ್ತಿಯ ಮೂಲಕ ಆ ಸ್ಥಳದ ಸ್ಪಷ್ಟತೆಯನ್ನು ಸಾಧಿಸಬಹುದು; ಮತ್ತು ಆ ಸ್ಥಳದಲ್ಲಿ ನಡೆಸುವ ಮಾನಸಿಕ ಪ್ರಕ್ರಿಯೆಗಳಿಂದ ಶುದ್ಧತೆಯನ್ನು ಸಾಧಿಸಬಹುದು.

ಧ್ಯಾನ ಮಾಡುವ ಮೊದಲು, ಸ್ಥಳವನ್ನು ಭೌತಿಕವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ಜೊತೆಗೆ, ಮಂತ್ರಗಳನ್ನು ಪಠಿಸುವ ಮೂಲಕ ಆ ಸ್ಥಳದಲ್ಲಿರುವ ಪ್ರತಿಕೂಲ ಶಕ್ತಿಗಳನ್ನು ತೆರವುಗೊಳಿಸುವುದು ಮತ್ತು ಸರ್ವಶಕ್ತನನ್ನು ಅಲ್ಲಿ ಅನುಸಂಧಾನ ಮಾಡುವ ಮೂಲಕ ಸ್ಥಳವನ್ನು ಶುದ್ಧೀಕರಿಸುವುದು ಸಹ ಅಗತ್ಯವಾಗಿದೆ.

ವೇದಗಳ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಅಥವಾ ಸಾಂಪ್ರದಾಯಿಕ ಧ್ಯಾನ ಶ್ಲೋಕಗಳನ್ನು ಪಠಿಸುವುದರಿಂದ - ಧ್ಯಾನದ ಸ್ಥಳದಲ್ಲಿರುವ ಯಾವುದೇ ಪ್ರತಿಕೂಲ ಶಕ್ತಿಗಳು ತೆರವುಗೊಳ್ಳುತ್ತವೆ. ಅಂತೆಯೇ, ಧ್ಯಾನದ ಸ್ಥಳದಲ್ಲಿ ಪರಬ್ರಹ್ಮದ ಉಪಸ್ಥಿತಿಯನ್ನು ಅನುಸಂಧಾನದ ಮೂಲಕ ಗಮನಿಸುವುದು ಅಂತಹ ಸ್ಥಳಕ್ಕೆ ಶುದ್ಧತೆಯನ್ನು ತರುತ್ತದೆ.

ನಮ್ಮ ಮನಸ್ಸು ಏಕಾಂತಕ್ಕೆ ಒಗ್ಗಿಕೊಂಡ ನಂತರ ಮತ್ತು ಧ್ಯಾನದ ಸ್ಥಳವು ಸಿದ್ಧವಾದಾಗ - ಸಾಧಕನು ಅತ್ಯಂತ ಪ್ರಮುಖವಾದ ಪೂರ್ವಸಿದ್ಧತಾ ಹಂತವಾದ ಬ್ರಹ್ಮಚರ್ಯವನ್ನು ಕೈಗೊಳ್ಳಬಹುದು. ನಮ್ಮ ಮುಂದಿನ ಬರಹದಲ್ಲಿ ನಾವು ಅದನ್ನೇ ಪ್ರಸ್ತುತಪಡಿಸುತ್ತೇವೆ

ಮಧ್ವೇಶ ಕೆ
ವೇದಿಕ್ ಟ್ರೈಬ್



3. ಬ್ರಹ್ಮಚರ್ಯದ ಪ್ರತಿಜ್ಞೆ

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣ ಹೇಳುತ್ತಾನೆ - ಉದ್ದೇಶಪೂರ್ವಕವಾದ ಧ್ಯಾನದ ಅಭ್ಯಾಸಕ್ಕಾಗಿ, ಸಾಧಕರು ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ("ಬ್ರಹ್ಮಚಾರಿ ವ್ರತ") (6.14)

ತಂತ್ರ ಶಾಸ್ತ್ರಗಳಲ್ಲಿ, ಮಾನವ ದೇಹದಲ್ಲಿನ ಏಳು ಪ್ರಮುಖ ಶಕ್ತಿ ಕೇಂದ್ರಗಳನ್ನು ಗುರುತಿಸಲಾಗಿದೆ. ಕೆಳಗಿನ ಮೂರು "ಮೂಲಾಧಾರ, ಸ್ವಾಧಿಷ್ಠಾನ ಮತ್ತು ಮಣಿಪುರ". ಮೇಲಿನ ಮೂರು "ಸಹಸ್ರಾರ, ಆಜ್ಞಾ ಮತ್ತು ವಿಶುದ್ಧಿ". ಮಧ್ಯಮವು "ಅನಾಹತ". 

ಅನಾಹತ (ಥೈಮಸ್ ಗ್ರಂಥಿಯ ಮೇಲಿನ) ಪ್ರಮುಖ ಕೇಂದ್ರವಾಗಿದೆ. ಅನಾಹತದ ಮಟ್ಟಕ್ಕಿಂತ ಮೇಲೆ ಜೀವ ಶಕ್ತಿಯನ್ನು ಏರಿಸುವುದು ಕಠಿಣ ಸಾಧನೆಯಾಗಿದೆ. ಅದೇ, ಅನಾಹತದವರೆಗೆ ಏರಿಸುವುದು ಸುಲಭ ಸಾಧನೆಯಾಗಿದೆ.

"ಅನಾಹತ" ದವರೆಗೆ ಏರಿದ ಜೀವ ಶಕ್ತಿಯು ಅನೇಕ ಕಾರಣಗಳಿಂದ ಸುಲಭವಾಗಿ ಕೆಳಕ್ಕೆ ಜಾರಬಹುದು: ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ತಾಮಸಿಕ ಆಹಾರವನ್ನು ಸೇವಿಸುವುದು, ಅತಿಯಾದ ನಿದ್ರೆ... ಇತ್ಯಾದಿ.

ಉದ್ದೇಶಪೂರ್ವಕ ಧ್ಯಾನದ ಅಭ್ಯಾಸಕ್ಕಾಗಿ (ಭಗವಾನ್ ಕೃಷ್ಣನು ಸೂಚಿಸಿದಂತೆ), ಜೀವ ಶಕ್ತಿಗಳನ್ನು "ಅನಾಹತ" ಮಟ್ಟಕ್ಕೆ ತರುವುದು ಮತ್ತು ನಂತರ ಅದನ್ನು ಮತ್ತಷ್ಟು ಏರಿಸುವುದು ಅತ್ಯಗತ್ಯ. ಯಾವುದೇ ಲೈಂಗಿಕ ಚಟುವಟಿಕೆಯು ಜೀವನದ ಶಕ್ತಿಗಳನ್ನು ಕೆಳಕ್ಕೆ ಜಾರುವಂತೆ ಮಾಡುತ್ತದೆ ಮತ್ತು ಆಧ್ಯಾತ್ಮಿಕ ಸಾಧನೆಯು ತಿರೋಧನವಾಗುತ್ತದೆ.

ಉದ್ದೇಶಪೂರ್ವಕ ಧ್ಯಾನವನ್ನು ಪ್ರಾರಂಭಿಸುವ ಮೊದಲು ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ಮಾಡಿ ಸಾಧಿಸಿದರೆ, ಆಧ್ಯಾತ್ಮ ಸಾಧನೆಯು ಯಾವುದೇ ತಿರೋಧನವಿಲ್ಲದೆ ಉದ್ದೇಶಿತ ಗುರಿಯನ್ನು ಮುಟ್ಟುತ್ತದೆ.

ಮುಂದಿನ ಬರಹದಲ್ಲಿ, ನಾವು ಧ್ಯಾನಕ್ಕೆ ಬೇಕಾದ ಸೂಕ್ತವಾದ ಆಸನವನ್ನು ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

4. ಸೂಕ್ತವಾದ ಆಸನ

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣನು ಹೇಳುತ್ತಾನೆ - ದರ್ಭೆ, ಜಿಂಕೆ ಚರ್ಮ ಮತ್ತು ಬಟ್ಟೆ ಇವು ಧ್ಯಾನಕ್ಕೆ ಸೂಕ್ತವಾದ ಆಸನ. (6.11)

"ದರ್ಭಾ" / "ಕುಶಾ" ಎಂಬ ಹುಲ್ಲು ವೈಜ್ಞಾನಿಕವಾಗಿ "ಡೆಸ್ಮೋಸ್ಟಾಚ್ಯಾ ಬಿಪಿನ್ನಟಾ" ಎಂದು ಕರೆಯಲ್ಪಡುತ್ತದೆ. ಇದು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು, ಮಹಿಳೆಯರಲ್ಲಿ ಹಾಲುಣಿಸುವಿಕೆಯನ್ನು ಸುಧಾರಿಸಲು ಇತ್ಯಾದಿಯಾಗಿ ಬಳಸಲಾಗುವ ಆಯುರ್ವೇದ ಮೂಲಿಕೆಯಾಗಿದೆ. ಇದು ಎಲ್ಲಾ ವೈದಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪುರಾಣದಲ್ಲಿ ಧರ್ಭಯು ವಿಷ್ಣುವಿನ ಕೂದಲಿಂದ ಜನಿಸಿದ್ದು ಎಂದು ಹೇಳಲಾಗುತ್ತದೆ. ಆದ್ದರಿಂದ, ವೈದಿಕ ಸಂಪ್ರದಾಯದಲ್ಲಿ ದರ್ಭೆಯಿಂದ ಮಾಡಿದ ಆಸನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.

ಇಂದು, ವನ್ಯಜೀವಿಗಳ ಅತಿಯಾದ ಬೇಟೆಯಿಂದಾಗಿ ಜಿಂಕೆ ಚರ್ಮದ ಬಳಕೆ ಕಾನೂನುಬದ್ಧವಾಗಿಲ್ಲ. ಆದಾಗ್ಯೂ, ಪ್ರಾಚೀನ ಭಾರತದಲ್ಲಿ ವನ್ಯಜೀವಿಗಳು ಹೇರಳವಾಗಿದ್ದಾಗ, ಜಿಂಕೆ, ಆನೆ, ಹುಲಿ ಇತ್ಯಾದಿಗಳ ಚರ್ಮವನ್ನು ತಪಸ್ವಿಗಳು ಬಳಸುತ್ತಿದ್ದರು. ಉದಾಹರಣೆಗೆ, ಧ್ಯಾನಕ್ಕಾಗಿ ಜಿಂಕೆ ಚರ್ಮದ ಆಸನವನ್ನು ಬಳಸುವುದರಿಂದ ಹಾವುಗಳು ಮತ್ತು ಇತರ ಜೀವಿಗಳು ಹಿಮ್ಮೆಟ್ಟಿ, ಸುರಕ್ಷತೆಯು ಉಂಟಾಗುತ್ತದೆ. 

ವೈದಿಕ ಸಂಪ್ರದಾಯದಲ್ಲಿ "ಪ್ರತ್ಯಾಮ್ನಾಯ" (ಪರ್ಯಾಯಗಳು) ಯಾವಾಗಲೂ ಅನುಮತಿಸಲಾಗಿದೆ ಮತ್ತು ಆದ್ದರಿಂದ ಜಿಂಕೆ ಚರ್ಮದ ಬದಲಿಗೆ ರೇಷ್ಮೆ ಬಟ್ಟೆಯನ್ನು ಆಸನಕ್ಕೆ ಬಳಸಬಹುದಾಗಿದೆ.

ಅಂತಿಮವಾಗಿ ಆಸನಕ್ಕಾಗಿ ಹತ್ತಿ ಬಟ್ಟೆಯನ್ನು ಬಳಸುವುದರಿಂದ ಸಾಧಕರಲ್ಲಿ ಸಾತ್ವಿಕ ಪ್ರವೃತ್ತಿಯು ಹೆಚ್ಚಿ ಧ್ಯಾನವನ್ನು ಅಭ್ಯಾಸ ಮಾಡುವಾಗ ಶಾಂತಿಯು ಮೈಗೂಡುತ್ತದೆ.

ಮುಂದಿನ ಬರಹದಲ್ಲಿ, ನಾವು ಆರಾಮದಾಯಕ ಭಂಗಿಯನ್ನು ಪ್ರಸ್ತುತಪಡಿಸುತ್ತೇವೆ

ಮಧ್ವೇಶ ಕೆ
ವೇದಿಕ್ ಟ್ರೈಬ್

— 

5. ಆರಾಮದಾಯಕ ಭಂಗಿ

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣ ಹೇಳುತ್ತಾನೆ - ಧ್ಯಾನಕ್ಕಾಗಿ, ದೇಹ, ಕುತ್ತಿಗೆ ಮತ್ತು ತಲೆಯನ್ನು ಸರಳ ರೇಖೆಯಲ್ಲಿ ದೃಢವಾಗಿ ಹಿಡಿದಿರಬೇಕು. (6.13)

ಅರ್ಧ ಪದ್ಮಾಸನವು ಸುಲಭವಾದ ಮತ್ತು ಅತ್ಯಂತ ಆರಾಮದಾಯಕವಾದ ಭಂಗಿಯಾಗಿದ್ದು, ಈ ಆಸನದಲ್ಲಿ ದೇಹ, ಕುತ್ತಿಗೆ ಮತ್ತು ತಲೆಯ ನೇರ ರೇಖೆಯನ್ನು ದೀರ್ಘಕಾಲದವರೆಗೆ ದೃಢವಾಗಿ ಹಿಡಿದಿಟ್ಟುಕೊಳ್ಳಬಹುದು. "ಪದ್ಮಾಸನ", "ವಜ್ರಾಸನ"... ಇತ್ಯಾದಿಗಳು ಇದನ್ನು ಸಾಧಿಸಲು ಸಹಾಯ ಮಾಡುತ್ತವೆಯಾದರೂ, ಆರಂಭಿಕರಿಗೆ ಅವುಗಳನ್ನು ದೀರ್ಘಕಾಲ ಹಿಡಿದಿಡಲು ಸಾಧ್ಯವಾಗುವುದಿಲ್ಲ. 


ಆಧುನಿಕ ಶರೀರಶಾಸ್ತ್ರದಲ್ಲಿ, ದೇಹ, ಕುತ್ತಿಗೆ ಮತ್ತು ತಲೆಯನ್ನು ಸರಳ ರೇಖೆಯಲ್ಲಿ ಹಿಡಿದಿಟ್ಟುಕೊಳ್ಳುವುದನ್ನು "ಗುಡ್ ಪಾಶ್ಚರ್" ಎಂದು ಪರಿಗಣಿಸಲಾಗುತ್ತದೆ. ಈ ಭಂಗಿಯನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸುಧಾರಿಸುತ್ತದೆ ಎಂದು ಅನೇಕ ಸಂಶೋಧಕರು ಸೂಚಿಸಿದ್ದಾರೆ.

ಯೋಗ ಸಂಪ್ರದಾಯದಲ್ಲಿ, ಈ "ಗುಡ್ ಪಾಶ್ಚರ್"ಅನ್ನು ಹಿಡಿದಿಟ್ಟುಕೊಳ್ಳುವುದು ಸೃಷ್ಟಿಯ ಉನ್ನತ ಸ್ಥರಗಳನ್ನು ಪ್ರವೇಶಿಸಲು ಕೀಲಿಯಾಗಿದೆ ಎಂದು ಹೇಳಲಾಗುತ್ತದೆ.

ಅದೇನೇ ಇದ್ದರೂ, ಭಗವಾನ್ ಕೃಷ್ಣನು ಸೂಚಿಸಿದಂತೆ ಧ್ಯಾನದಲ್ಲಿ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳುವುದು ಅತ್ಯಗತ್ಯ ಪ್ರಕ್ರಿಯೆಯಾಗಿದೆ.

ನಮ್ಮ ಮುಂದಿನ ಬರಹದಲ್ಲಿ, ನಾವು "ಸ್ಥಿರ ನೋಟ" ವನ್ನು ಚರ್ಚಿಸುತ್ತೇವೆ.
 

ಮಧ್ವೇಶ ಕೆ
ವೇದಿಕ್ ಟ್ರೈಬ್

— 

6. ಸ್ಥಿರ ನೋಟ

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣ ಹೇಳುತ್ತಾನೆ - ಧ್ಯಾನದಲ್ಲಿ, ದೃಷ್ಟಿ ಮೂಗಿನ ತುದಿಯಲ್ಲಿರಬೇಕು ಮತ್ತು ಕಣ್ಣುಗಳನ್ನು ಅಲೆದಾಡಲು ಬಿಡಬಾರದು. (6.13)

ಹಠಯೋಗ ಸಂಪ್ರದಾಯದಲ್ಲಿ, "ನಾಸಿಕಾಗ್ರ ಮುದ್ರಾ" ಅಥವಾ "ನಾಸಿಕಾಗ್ರ ದೃಷ್ಟಿ ಮುದ್ರೆ"ಯಲ್ಲಿ ಕಣ್ಣುಗಳನ್ನು ತೆರೆದಿಟ್ಟು ಈ ಪ್ರಕ್ರಿಯೆಯನ್ನು ಅಭ್ಯಾಸಿಸಲಾಗುತ್ತದೆ ("ಘೇರಾಂಡಾ ಸಂಹಿತಾ" ನೋಡಿ). ಆರಂಭಿಕರಿಗಾಗಿ, ಮೂಗಿನ ತುದಿಗೆ ಕಣ್ಣುಗಳನ್ನು ನಿರ್ದೇಶಿಸಲು ಹೆಬ್ಬೆರಳನ್ನು ಬಳಸಲಾಗುತ್ತದೆ. ಮಧ್ಯಂತರ ಅಭ್ಯಾಸ ಮಾಡುವವರಿಗೆ, ಯಾವುದೇ ಬಾಹ್ಯ ಸಹಾಯವಿಲ್ಲದೆ ಮೂಗಿನ ತುದಿಯಲ್ಲಿ ದೃಷ್ಟಿ ಇಡಲು ಸೂಚಿಸಲಾಗುತ್ತದೆ. ಈ ಮುದ್ರೆಯು ಭಗವದ್ಗೀತೆಯಲ್ಲಿ ಕೃಷ್ಣ ಸೂಚಿಸುವ ಧ್ಯಾನದ ಅಭ್ಯಾಸ ಮಾಡಲು ನಮಗೆ ಸಹಾಯ ಮಾಡುತ್ತದೆ.

ಹಠಯೋಗದ ಮುದ್ರೆಯಲ್ಲಿ, ಅಭ್ಯಾಸಕ್ಕಾಗಿ ಕಣ್ಣುಗಳನ್ನು ತೆರೆದಿಡಲಾಗುತ್ತದೆ. ಆದರೆ ಗೀತೆಯ ಧ್ಯಾನ ಪ್ರಕ್ರಿಯೆಯಲ್ಲಿ, ಕಣ್ಣುಗಳನ್ನು ಮುಚ್ಚಿಡಲಾಗುತ್ತದೆ‌ (ಕಣ್ಣನ್ನು ಮುಚ್ಚಿಕೊಂಡೇ ದೃಷ್ಟಿಯನ್ನು ಮೂಗಿನ ತುದಿಯಲ್ಲಿ ಕೇಂದ್ರೀಕರಿಸಲಾಗುತ್ತದೆ). ಧ್ಯಾನದಲ್ಲಿ ಈ ಅಭ್ಯಾಸವು ಕಷ್ಟಕರವಾಗಿರುವ ಕಾರಣ ಮೊದಲು ನಾಸಿಕಾಗ್ರ ಮುದ್ರೆಯನ್ನು ಅಭ್ಯಾಸ ಮಾಡಿ ನಂತರ ಅದನ್ನು ಧ್ಯಾನಸ್ಥಿತಿಗೆ ತರಲು ಸೂಚಿಸಲಾಗುತ್ತದೆ.

ಆರಂಭದಲ್ಲಿ ಮೂಗಿನ ತುದಿಯಲ್ಲಿ ಉದ್ದೇಶಪೂರ್ವಕವಾಗಿ ದೃಷ್ಟಿ ಇಡುವುದರಿಂದ ಯಾಂತ್ರಿಕವಾಗಿ ಮನಸ್ಸಿಗೆ ಏಕಾಗ್ರತೆ ಬರುತ್ತದೆ .. ಆದರೆ ಮನಸ್ಸು ದೂರ ಸರಿಯುತ್ತಿದ್ದಂತೆಯೇ ಕಣ್ಣುಗುಡ್ಡೆಗಳೂ ಕೇಂದ್ರದಿಂದ ದೂರ ಸರಿಯುತ್ತವೆ. ಅಂತಹ ಚಲನೆಯು ಸಂಭವಿಸಿದಾಗ, ಸಾಧಕರು ದೃಷ್ಟಿಯನ್ನು ಮರಳಿ ಕೇಂದ್ರೀಕೃತ ಮಾಡಿ ಉದ್ದೇಶಪೂರ್ವಕವಾಗಿ ಏಕಾಗ್ರತೆಯನ್ನು ಮನಸ್ಸಿಗೆ ತರಬೇಕು.

ಈ ಉದ್ದೇಶಪೂರ್ವಕ ಅಭ್ಯಾಸವು ಧ್ಯಾನದ ಅಂತಿಮ ಹಂತಕ್ಕೆ ಅಡಿಪಾಯವನ್ನು ಹಾಕುತ್ತದೆ - "ಒಂದು ಮೊನಚಾದ ಏಕಾಗ್ರತೆ". ಇದನ್ನು ನಾವು ಮುಂದಿನ ಬರಹದಲ್ಲಿ ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


— 

7. ಒಂದು ಮೊನಚಾದ ಏಕಾಗ್ರತೆ

ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಹೇಳುತ್ತಾನೆ - ಶಿಸ್ತಿನ ಮನಸ್ಸಿನ ಸಹಾಯದಿಂದ ಯೋಗಿಯು ನಿರ್ವಾಣವನ್ನು ಪಡೆದು ಪರಬ್ರಹ್ಮವನ್ನು ಸೇರುತ್ತಾರೆ. (6.15)

ವಿಭಿನ್ನ ಧ್ಯಾನ ವಿಧಾನಗಳಲ್ಲಿ, ಮನಸ್ಸನ್ನು ವಿಭಿನ್ನ ವಸ್ತುಗಳ ಅಥವಾ ವಿಚಾರಗಳ ಮೇಲೆ ಕೇಂದ್ರೀಕೃತ ಮಾಡಲಾಗುತ್ತದೆ (ಉದಾ: ಉಸಿರಾಟದ ಮೇಲೆ, ಜೀವ ಶಕ್ತಿಗಳ ಮೇಲೆ, ದೈಹಿಕ ಸಂವೇದನೆಗಳ ಮೇಲೆ, ದೀಪದ ಮೇಲೆ... ಇತ್ಯಾದಿ). ಆದರೆ ಕೃಷ್ಣನು ಹೇಳುವ ಧ್ಯಾನದಲ್ಲಿ ಮನಸ್ಸು ಪರಬ್ರಹ್ಮದ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಈ ಪರಬ್ರಹ್ಮವು ಸೃಷ್ಟಿಯ ಒಳಗೂ ಹೊರಗೂ ಅನಂತವಾಗಿ ವ್ಯಾಪ್ತವಾಗಿದೆ. ಧ್ಯಾನದಲ್ಲಿ, ಪರಬ್ರಹ್ಮದ ಈ ಗುಣಲಕ್ಷಣದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ, ಸಕ್ರಿಯವಾಗಿ ಆಲೋಚಿಸಿ ಮತ್ತು ಆನುಭಾವಿಕವಾಗಿ ಗಮನಿಸಬೇಕು. ಈ ಪ್ರಕ್ರಿಯೆಯಲ್ಲಿ ಮನಸ್ಸು ಸಂಪೂರ್ಣವಾಗಿ ತೊಡಗಿರಬೇಕು.

ಈ ಗುಣಲಕ್ಷಣಗಳನ್ನು ಗಮನಿಸಲು ನಮಗೆ ಸಹಾಯ ಮಾಡುವ ಅನೇಕ ವೇದ ಮಂತ್ರಗಳು ಮತ್ತು ಸೂಕ್ತಗಳಿವೆ; ಉದಾ: ಗಾಯತ್ರಿ ಮಂತ್ರ, ಪುರುಷ ಸೂಕ್ತ... ಇತ್ಯಾದಿ. ಧ್ಯಾನ ಮಾಡುವಾಗ, ಈ ಮಂತ್ರಗಳ ಅರ್ಥವನ್ನು ನಮ್ಮ ಸ್ವಂತ ಅನುಭವಗಳೊಂದಿಗೆ ಗಮನಿಸಬಹುದು. ಇದು ಮನಸ್ಸನ್ನು ಸಂಪೂರ್ಣವಾಗಿ ಪರಮಾತ್ಮನಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಸಾಧಕರು ಸಾಕಷ್ಟು ಜೀವ-ಸಂಸ್ಕಾರವನ್ನು ಸಂಗ್ರಹಿಸಿ ನಿರ್ವಾಣವನ್ನು ಹೊಂದುವರು ಮತ್ತು ಕಡೆಯಲ್ಲಿ ಪರಬ್ರಹ್ಮವನ್ನು ಹೊಂದುವರು.


"ಭಗವದ್ಗೀತೆಯಿಂದ ಧ್ಯಾನಕ್ಕೆ ಬೇಕಾದ ಏಳು ಪ್ರಕ್ರಿಯೆಗಳು" ಎಂಬ ಈ ಸರಣಿಯನ್ನು ತಂದಿರುವುದಕ್ಕೆ ವೇದಿಕ್ ಟ್ರೈಬ್ ಗೆ ಸಂತೋಷವಾಗಿದೆ.

ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಅಭ್ಯಾಸದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ನಿಮ್ಮನ್ನು ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ.

ಒಳ್ಳೆಯದಾಗಲಿ.

ಮಧ್ವೇಶ ಕೆ
ವೇದಿಕ್ ಟ್ರೈಬ್



No comments:

Post a Comment