Six meditation techniques directly from Yoga Sutras - for beginners

Friday, February 16, 2024

ಯೋಗ ದರ್ಶನದ ಪ್ರಕಾರ ದುಃಖಕ್ಕೆ ಐದು ಕಾರಣಗಳು

ಯೋಗ ದರ್ಶನದ ಪ್ರಕಾರ ದುಃಖಕ್ಕೆ ಐದು ಕಾರಣಗಳು

ಪರಿಚಯ

ಎಲ್ಲಾ ವೈದಿಕ ಮತ್ತು ಅವೈದಿಕ ದರ್ಶನಗಳು - ಎಲ್ಲಾ ಜೀವಿಗಳು ದುಃಖವನ್ನು ವಿವಿಧ ರೂಪಗಳಲ್ಲಿ ಮತ್ತು ವಿವಿಧ ಹಂತಗಳಲ್ಲಿ ಅನುಭವಿಸುತ್ತಿವೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳುತ್ತವೆ.

ಬೌದ್ಧಧರ್ಮದಲ್ಲಿ, ಲೌಕಿಕ ಸಂಬಂಧ ("ಸಂಸಾರ") ದುಃಖಕ್ಕೆ ಕಾರಣವಾಗಿದೆ. ಜೈನ ಧರ್ಮ ಮತ್ತು ವೇದಾಂತದಲ್ಲಿ, ಕರ್ಮ-ಚಕ್ರವು ದುಃಖಕ್ಕೆ ಕಾರಣವಾಗಿದೆ.

ಯೋಗ ದರ್ಶನದಲ್ಲಿ, ಈ ದುಃಖವನ್ನು "ಕ್ಲೇಶ" ಎಂದು ಕರೆಯಲಾಗುತ್ತದೆ ಮತ್ತು ಇದಕ್ಕೆ ಐದು ಕಾರಣಗಳನ್ನು ಹೇಳಲಾಗುತ್ತದೆ: ಅವಿದ್ಯಾ (ಅಜ್ಞಾನ), ಅಸ್ಮಿತಾ (ಅಭಿಮಾನ), ರಾಗ (ಅಂಟು), ದ್ವೇಷ (ವಿರಾಗತೆ) ಮತ್ತು ಅಭಿನಿವೇಶ (ಸಾವಿನ ಭಯ).

ಕ್ಲೇಶವು ಮನಸ್ಸನ್ನು ಆಧ್ಯಾತ್ಮಿಕ ಬೆಳವಣಿಗೆಗೆ ಫಲವತ್ತಾದ ನೆಲವಾಗಿ ವಿಕಸನಗೊಳ್ಳುವುದರಿಂದ ತಡೆಯುತ್ತದೆ.

ಸರಿಯಾದ ಆಧ್ಯಾತ್ಮಿಕ ಅಭ್ಯಾಸದೊಂದಿಗೆ, ಸಾಧಕರು ಈ ಐದು ಕಾರಣಗಳನ್ನು ತೊಡೆದುಹಾಕುತ್ತಾರೆ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿ ಹೊಂದುತ್ತಾರೆ.

ವೇದಿಕ್ ಟ್ರೈಬ್ ಗೆ "ಯೋಗ ದರ್ಶನದ ಪ್ರಕಾರ ದುಃಖಕ್ಕೆ ಐದು ಕಾರಣಗಳು" ಎಂಬ ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ.

ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ನಮ್ಮ ಮುಂದಿನ ಬರಹದಲ್ಲಿ ನಾವು "ಅವಿದ್ಯೆ" (ಅಜ್ಞಾನ) ಎಂಬ ಮೊದಲ ಕಾರಣವನ್ನು ಪ್ರಸ್ತುತಪಡಿಸುತ್ತೇವೆ


ಮಧ್ವೇಶ ಕೆ
ವೇದಿಕ್ ಟ್ರೈಬ್

— 

1. ಅವಿದ್ಯಾ (ಅಜ್ಞಾನ)

ವೈದಿಕ ಸಂಪ್ರದಾಯದಲ್ಲಿ, "ವಿದ್ಯಾ" (ಆಧ್ಯಾತ್ಮಿಕ ಜ್ಞಾನ) ನಿಶ್ಚಯ ಜ್ಞಾನವನ್ನು (ಸಂಪೂರ್ಣ ಸತ್ಯದ ಮೇಲೆ ಸ್ಥಿರತೆಯನ್ನು) ಪ್ರದಾನ ಮಾಡುತ್ತದೆ. 

ಮತ್ತೊಂದೆಡೆ, "ಅವಿದ್ಯಾ" (ಆಧ್ಯಾತ್ಮಿಕ ಜ್ಞಾನದ ಕೊರತೆ), ಅನಿಶ್ಚಯ ಜ್ಞಾನವನ್ನು (ಸತ್ಯದ ಬಗ್ಗೆ ಅಸ್ಪಷ್ಟ ಅಭಿಪ್ರಾಯಗಳನ್ನು) ಪ್ರದಾನ ಮಾಡುತ್ತದೆ. 

ಉದಾಹರಣೆಗೆ, ನಾವು ಅನಿರೀಕ್ಷಿತ ನೈತಿಕ ಅಥವಾ ನೈಸರ್ಗಿಕ ದುಃಖವನ್ನು ಅನುಭವಿಸಿದಾಗ, ನಾವು "ನನಗೇ ಏಕೆ ಹೀಗೆ?" ಎಂದು ಕೇಳುತ್ತೇವೆ. ಈ ಪ್ರಶ್ನೆಯು ಕರ್ಮ-ಚಕ್ರದ ಬಗೆಗಿನ ಆಧ್ಯಾತ್ಮಿಕ ಜ್ಞಾನದ ಅಭಾವದಿಂದ ಮತ್ತು ನಮ್ಮದೇ ಆದ ಅಸ್ಪಷ್ಟ ಅಭಿಪ್ರಾಯಗಳಿಂದ ಬಂದಿದೆ. ಒಮ್ಮೆ ನಾವು "ವಿದ್ಯಾ"ವನ್ನು ಪಡೆದುಕೊಂಡರೆ, ನಾವು ನಮ್ಮದೇ ಆದ ಕರ್ಮದ ಫಲಗಳನ್ನು ಗ್ರಹಿಸುತ್ತೇವೆ ಮತ್ತು ಪ್ರಸ್ತುತ ಪರಿಸ್ಥಿತಿಯ ಜವಾಬ್ದಾರಿಯನ್ನು ಸ್ವೀಕರಿಸುತ್ತೇವೆ. ಈ "ವಿದ್ಯಾ" ನಾವು ಜಗತ್ತನ್ನು ಎದುರಿಸುತ್ತಿರುವಾಗ ಆಗುವ ದುಃಖವನ್ನು ಕಡಿಮೆ ಮಾಡುತ್ತದೆ ಮತ್ತು ತೆಗೆದೂಹಾಕುತ್ತದೆ 

ಯೋಗ ಸಂಪ್ರದಾಯದಲ್ಲಿ, "ವಿದ್ಯಾ"ವನ್ನು ಬೆಳೆಸಲು ಮತ್ತು ಅನಿಶ್ಚಯ ಜ್ಞಾನ ವನ್ನು ತೊಡೆದುಹಾಕಲು ವೈದಿಕ ಸಂಪ್ರದಾಯದಲ್ಲಿನ ಗ್ರಂಥಗಳ ಅಧ್ಯಯನವನ್ನು ಶಿಫಾರಸು ಮಾಡಲಾಗಿದೆ. 

ನೀವು ಆಧ್ಯಾತ್ಮಿಕ ಅಭ್ಯಾಸದಲ್ಲಿ ಆರಂಭಿಕರಾಗಿದ್ದರೆ, ಭಗವದ್ಗೀತೆ, ಯೋಗ ಸೂತ್ರ ಮುಂತಾದ ಸರಳ ಗ್ರಂಥಗಳೊಂದಿಗೆ ನಿಮ್ಮ ಅಧ್ಯಯನವನ್ನು ಪ್ರಾರಂಭಿಸಬಹುದು. ಇದು ನಿರಂತರವಾಗಿ "ವಿದ್ಯಾ"ವನ್ನು ಪಡೆದುಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ನಮ್ಮ ಮುಂದಿನ ಬರಹದಲ್ಲಿ ನಾವು "ಅಸ್ಮಿತಾ" (ಅಭಿಮಾನ) ಎಂಬ ಎರಡನೇ ಕಾರಣವನ್ನು ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

2. ಅಸ್ಮಿತಾ (ಅಭಿಮಾನ)

ಯೋಗ ಸಂಪ್ರದಾಯದಲ್ಲಿ, ಅಹಂಕಾರ ಎಂಬುದು "ತನ್ನ ಅಸ್ತಿತ್ವದ ಅರಿವು"; ಅಸ್ಮಿತಾ ಎಂಬುದು "ತನ್ನ ಬಗೆಗಿನ ಅಭಿಮಾನ"; ಮತ್ತು ಸ್ವಾನುರಾಗ ಎಂಬುದು "ತನ್ನ ಬಗೆಗಿನ ದುರಭಿಮಾನ" ಆಗಿದೆ.

ಒಬ್ಬ ವ್ಯಕ್ತಿಯ ದೃಷ್ಟಿಕೋನವು ಸರಳವಾದ ಅಸ್ತಿತ್ವದ ಅರಿವಿನಿಂದ, ಸಂಕೀರ್ಣವಾದ ಅಭಿಮಾನದವರೆಗು ಮತ್ತು ವಿನಾಶಕಾರಿಯಾದ ದುರಭಿಮಾನದವರೆಗೂ ಇರಬಹುದು. ಅಸ್ತಿತ್ವದ ಅರಿವು "ಸಾತ್ವಿಕ ಗುಣ"ದ ಭಾಗವಾಗಿದೆ, ಅಭಿಮಾನವು "ರಾಜಸ ಗುಣ"ದ ಭಾಗವಾಗಿದೆ ಮತ್ತು ದುರಭಿಮಾನವು "ತಾಮಸ ಗುಣ" ದ ಭಾಗವಾಗಿದೆ. 

ಅಸ್ತಿತ್ವದ ಅರಿವು ಪ್ರಾಪಂಚಿಕ ವ್ಯವಹಾರಕ್ಕೆ ಅತ್ಯಗತ್ಯ. ಯೋಗ ಸಂಪ್ರದಾಯದಲ್ಲಿ, ಇದನ್ನು ಆಳವಾದ ಧ್ಯಾನ ಅಭ್ಯಾಸದ ಭಾಗವಾಗಿ ಗಮನಿಸಲಾಗುತ್ತದೆ.

ಅಭಿಮಾನವು ಸಾಮಾಜಿಕ ಮಟ್ಟದಲ್ಲಿ ಯೋಗಕ್ಷೇಮವನ್ನು ಸೃಷ್ಟಿಸಲು ಅತ್ಯಗತ್ಯ. ಆದರೆ ವೈಯಕ್ತಿಕ ಮಟ್ಟದಲ್ಲಿ, ಸಾಧಕರು ಅಭಿಮಾನವನ್ನು ತೆಗೆದುಹಾಕಲು ಪ್ರಯತ್ನಿಸಬೇಕು. ಏಕೆಂದರೆ ಅಭಿಮಾನವು ವ್ಯಕ್ತಿಯ ಮನಸ್ಸಿನಲ್ಲಿ ಒಂದು ತನ್ನತನದ ಚಿತ್ರಣವನ್ನು ಸೃಷ್ಟಿಸುತ್ತದೆ ಮತ್ತು ಈ ಚಿತ್ರಕ್ಕೆ ಯಾವುದೇ ಧಕ್ಕೆ ಬಂದರೂ ಮಾನಸಿಕ ದುಃಖ ಉಂಟಾಗುತ್ತದೆ.

ಸ್ವಾನುರಾಗವು, ಇತರ ಮನೋವಿಕಾರಗಳ ಜೊತೆಗೆ ಸಮಕಾಲೀನ ಮನೋವಿಜ್ಞಾನದಲ್ಲಿ ವ್ಯಾಖ್ಯಾನಿಸಿದಂತೆ "ಡಾರ್ಕ್ ಟ್ರೈಡ್" ಎನಿಸಿಕೊಳ್ಳುತ್ತದೆ. ಸ್ವಾನುರಾಗವು ಇತರರ ನಷ್ಟದಿಂದ ತನಗೆ ಲಾಭವುಂಟುಮಾಡುವುದರಿಂದ, ಅದನ್ನು ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಸಂಪೂರ್ಣವಾಗಿ ತೊಡೆದುಹಾಕಬೇಕಾಗಿದೆ.

ಅಭಿಮಾನದ ಕಡೆಗಿನ ನಮ್ಮ ಪ್ರವೃತ್ತಿಯನ್ನು ಗಮನಿಸುವ ದೈನಂದಿನ ಧ್ಯಾನದ ಅಭ್ಯಾಸವು ನಮ್ಮ ಸುಪ್ತ ಮನಸ್ಸಿನಿಂದ ಕ್ರಮೇಣ ಅದನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ನಮ್ಮ ಮುಂದಿನ ಬರಹದಲ್ಲಿ, "ರಾಗ" (ಅಂಟು) ಎಂಬ ಮೂರನೇ ಕಾರಣವನ್ನು ನಾವು ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

3. ರಾಗ (ಅಂಟು)

ಮಾನವರು ಸಾಮಾಜಿಕ ಪ್ರಾಣಿಗಳು ಮತ್ತು ಸಮಾಜದೊಳಗಿನ ಭಾಂದವ್ಯವು ಮಾನವಕುಲದ ಉಳಿವು ಮತ್ತು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಅಂಶವಾಗಿದೆ. 

ಮನುಷ್ಯರಲ್ಲಿರುವ "ಅರಿವಿನ ವಿಕಸನ"ವು ಸರಳವಾದ ಆಲೋಚನೆಯನ್ನು ಸಂಕೀರ್ಣವಾದ ಭಾವನೆಯಾಗಿ ಪರಿವರ್ತಿಸಲು ಮನಸ್ಸನ್ನು ಶಕ್ತಗೊಳಿಸಿದೆ. 

ಅಂತಹ ಸರಳ ಆಲೋಚನೆಗಳಲ್ಲಿ ಒಂದಾದ "ಪ್ರೀತಿ / ವಾತ್ಸಲ್ಯ" ಇದು ಸಂಕೀರ್ಣವಾದ ಭಾವನೆಯಾಗಿ, ಅಂದರೆ ಅಂಟಿನ ಸ್ವಾಮ್ಯಸೂಚಕತೆಯಾಗಿ ಪರಿವರ್ತನೆ ಆಗಿಬಿಟ್ಟಿದೆ. ಸರಳವಾದ ಪ್ರೀತಿ / ವಾತ್ಸಲ್ಯವು ಒಂದು ಸಾರ್ಥಕ ಜೀವನಕ್ಕೆ ಸಾಕು, ಆದರೆ ನಾವು ಅರಿವಿಲ್ಲದೆ ಅದನ್ನು ಅಂಟಿನ ಸ್ವಾಮ್ಯಸೂಚಕತೆಯಾಗಿ ಬದಲಾಯಿಸಿಕೊಂಡು ದುಃಖಿತರಾಗಿದ್ದೇವೆ.

ವೈದಿಕ ಸಂಪ್ರದಾಯದಲ್ಲಿ, ಪ್ರೀತಿ ಮತ್ತು ವಾತ್ಸಲ್ಯಗಳಿಗೆ ಹೇರಳವಾದ ಪುಷ್ಟಿ ಇದೆ, ಆದರೆ ಅಂಟಿನ ಸ್ವಾಮ್ಯಸೂಚಕತೆಯನ್ನು ವಿರೋಧಿಸಲಾಗುತ್ತದೆ. 

ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಹೇಳುತ್ತಾನೆ - ಒಂದು ವಿಷಯದ ನಿರಂತರ ಚಿಂತನೆಯು ಅಂಟಿಗೆ ಕಾರಣವಾಗುತ್ತದೆ; ಅಂಟು ಬಯಕೆಗೆ ಕಾರಣವಾಗುತ್ತದೆ; ಬಯಕೆ ಕೋಪಕ್ಕೆ ಕಾರಣವಾಗುತ್ತದೆ; ಕೋಪವು ಮೋಡ ಕವಿದ ಮನಸ್ಸಿಗೆ ಕಾರಣವಾಗುತ್ತದೆ; ಮೋಡ ಕವಿದ ಮನಸ್ಸು ಸರಿ ತಪ್ಪುಗಳನ್ನು ಗುರುತಿಸಲು ಅಸಮರ್ಥವಾಗುತ್ತದೆ; ಆಗ ಬುದ್ಧಿ ನಾಶವಾಗುತ್ತದೆ; ಮತ್ತು ಅಂತಿಮವಾಗಿ ಜೀವಾತ್ಮ ಪ್ರಕಾಶವನ್ನು ಕಳೆದುಕೊಳ್ಳುತ್ತದೆ (2: 62 & 63).

ನಮ್ಮ ಕಡುಬಯಕೆಗಳನ್ನು ಗಮನಿಸುವ ದೈನಂದಿನ ಧ್ಯಾನದ ಅಭ್ಯಾಸವು ಪ್ರೀತಿ / ವಾತ್ಸಲ್ಯದಂತಹ ನಮ್ಮ ಸರಳ ಆಲೋಚನೆಗಳು ಮತ್ತು ಅಂಟಿನಂತಹಾ ಸಂಕೀರ್ಣ ಭಾವನೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ನಮಗೆ ಸಹಾಯ ಮಾಡುತ್ತದೆ. ಇದು ಅಂಟಿನಿಂದ ಉಂಟಾಗುವ ದುಃಖದಿಂದ ದೂರವಿರಲು ಅನುವು ಮಾಡಿಕೊಡುತ್ತದೆ 

ನಮ್ಮ ಮುಂದಿನ ಬರಹದಲ್ಲಿ, "ದ್ವೇಷ" (ವಿರಾಗತೆ) ಎಂಬ ನಾಲ್ಕನೇ ಕಾರಣವನ್ನು ನಾವು ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


— 

4. ದ್ವೇಷ (ವಿರಾಗತೆ)

ಸಾಮಾನ್ಯ ಭಾಷೆಯಲ್ಲಿ, "ದ್ವೇಷ" ವನ್ನು "hatred" ಎಂದು ಬಳಸಲಾಗುತ್ತದೆ. ಆದರೆ, ವೈದಿಕ ಭಾಷೆಯಲ್ಲಿ "ರಾಗ-ದ್ವೇಷ" ಎಂದರೆ "ರಾಗ-ವಿರಾಗತೆ" ಎಂದು ಬಳಸಲಾಗುತ್ತದೆ.

ಮನುಷ್ಯರಲ್ಲಿರುವ "ಅರಿವಿನ ವಿಕಸನ"ವು ಸರಳವಾದ ಆಲೋಚನೆಯನ್ನು ಸಂಕೀರ್ಣವಾದ ಭಾವನೆಯಾಗಿ ಪರಿವರ್ತಿಸಲು ಮನಸ್ಸನ್ನು ಶಕ್ತಗೊಳಿಸಿದೆ. 

ಅಂತಹ ಸರಳ ಆಲೋಚನೆಗಳಲ್ಲಿ ಒಂದಾದ "ಸಹಜ ರಕ್ಷಣಾತ್ಮಕತೆ" ಸಂಕೀರ್ಣ ಭಾವನೆಯಾದ "ವಿರಾಗತೆ" ಆಗಿ ಪರಿಣಮಿಸುತ್ತದೆ. ಸರಳವಾದ ಸಹಜ ರಕ್ಷಣಾತ್ಮಕತೆ ಒಂದು ಸುರಕ್ಷಿತ ಜೀವನಕ್ಕೆ ಸಾಕು, ಆದರೆ ನಾವು ಅರಿವಿಲ್ಲದೆ ಅದನ್ನು ವಿರಾಗತೆಯಾಗಿ ಬದಲಾಯಿಸಿಕೊಂಡು ದುಃಖಿತರಾಗಿದ್ದೇವೆ.

ವೈದಿಕ ಸಂಪ್ರದಾಯದಲ್ಲಿ, ಸಹಜ ರಕ್ಷಣಾತ್ಮಕತೆಗೆ ಹೇರಳವಾದ ಪುಷ್ಟಿ ಇದೆ, ಆದರೆ ವಿರಾಗವನ್ನು ವಿರೋಧಿಸಲಾಗುತ್ತದೆ. 

ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣನು ಇಂದ್ರಿಯಗಳಿಗೆ ರಾಗ ಮತ್ತು ದ್ವೇಷವನ್ನು ಅನುಭವಿಸುವುದು ಒಂದು ಸಹಜ ಪ್ರಕ್ರಿಯೆ ಎಂದು ಹೇಳುತ್ತಾನೆ. ಆದರೆ ಅವು ಶತ್ರುಗಳು ಮತ್ತು ಅವುಗಳನ್ನು ತಪ್ಪಿಸಬೇಕು ಎಂದೂ ಹೇಳುತ್ತಾನೆ. (3.34)

ನಮ್ಮ ಇಷ್ಟಗಳನ್ನು ಮತ್ತು ಅನಿಷ್ಟಗಳನ್ನು ಗಮನಿಸುವ ದೈನಂದಿನ ಧ್ಯಾನದ ಅಭ್ಯಾಸವು ನಮಗೆ ಸಹಜವಾದ ರಕ್ಷಣಾತ್ಮಕತೆ ಮತ್ತು ವಿರಾಗತೆಗಳ ನಡುವೆ ಇರುವ ವ್ಯತ್ಯಾಸವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಇದು ಜಗತ್ತಿಗೆ ಮುಖಾಮುಖಿಯಾಗುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅನಗತ್ಯ ವಿರಾಗಗಳನ್ನು ಲೆಕ್ಕಿಸದೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು ನಮಗೆ ಅನುವು ಮಾಡಿಕೊಡುತ್ತದೆ.

ನಮ್ಮ ಮುಂದಿನ ಬರಹದಲ್ಲಿ, ನಾವು "ಅಭಿನಿವೇಶ" (ಸಾವಿನ ಭಯ) ಎಂಬ ಐದನೇ ಕಾರಣವನ್ನು ಪ್ರಸ್ತುತಪಡಿಸುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್

— 

5. ಅಭಿನಿವೇಶ (ಸಾವಿನ ಭಯ)

ಮಾನವ ಇತಿಹಾಸದಲ್ಲಿ ಎಲ್ಲಾ ತತ್ವಶಾಸ್ತ್ರದ ಮೂಲಭೂತ ಪ್ರಶ್ನೆಗಳಲ್ಲಿ ಒಂದು ಸಾವಿನ ನಂತರದ ಏನಿದೆ ಎಂಬ ಪ್ರಶ್ನೆಯಾಗಿದೆ. 

ಧಾರ್ಮಿಕವಲ್ಲದ / ಜಾತ್ಯತೀತ ತತ್ತ್ವಶಾಸ್ತ್ರದಲ್ಲಿ, ಹೆಚ್ಚಿನ ತತ್ವಜ್ಞಾನಿಗಳು ಸಾವಿನ ನಂತರದ ಜೀವನವನ್ನು ನಿರಾಕರಿಸುವ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ಜೀವ-ಸತ್ವವು ವಿವಿಧ ರೂಪಗಳಲ್ಲಿ ಬ್ರಹ್ಮಾಂಡದಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ ಎಂದು ಕೆಲವರು ನಂಬುತ್ತಾರೆ. 

ಎಲ್ಲಾ ಪ್ರಮುಖ ಧಾರ್ಮಿಕ ತತ್ವಗಳಲ್ಲಿ, ಸಾವಿನ ನಂತರದ ಜೀವನವನ್ನು ವಿವಿಧ ರೂಪಗಳಲ್ಲಿ ಸ್ವೀಕರಿಸಲಾಗಿದೆ. ಯೋಗ ಸಂಪ್ರದಾಯವನ್ನು ಒಳಗೊಂಡಂತೆ ವೈದಿಕ ತತ್ತ್ವಶಾಸ್ತ್ರದಲ್ಲಿ, "ಜೀವಾತ್ಮ" ದ ಜನ್ಮಾಂತರಗಳನ್ನು ಒಪ್ಪಿಕೊಳ್ಳಲಾಗಿದೆ. ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಹೇಳುತ್ತಾನೆ - ಒಬ್ಬ ವ್ಯಕ್ತಿಯು ಹೊಸ ಬಟ್ಟೆಗಳನ್ನು ಧರಿಸಿ, ಹಳೆಯದನ್ನು ತ್ಯಜಿಸಿದಂತೆ, "ಜೀವಾತ್ಮ" ಹೊಸ ಭೌತಿಕ ದೇಹಗಳನ್ನು ಸ್ವೀಕರಿಸುತ್ತದೆ, ಹಳೆಯ ಮತ್ತು ನಿಷ್ಪ್ರಯೋಜಕವಾದವುಗಳನ್ನು ತ್ಯಜಿಸುತ್ತದೆ. (2.22). ಭಗವದ್ಗೀತೆಯಲ್ಲಿ "ಜೀವಾತ್ಮ" ದ ಈ ಜನ್ಮಾಂತರಗಳನ್ನು ವಿವರಿಸಲು ಇಂತಹ ಅನೇಕ ರೂಪಕಗಳನ್ನು ಬಳಸಲಾಗಿದೆ.

ಆಧ್ಯಾತ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಪಂಡಿತರಿಗೂ ಸಾವಿನ ಭಯ ಉಳಿದಿರುತ್ತದೆ, ಏಕೆಂದರೆ ಅವರ ಪ್ರತ್ಯಕ್ಷ ಅನುಭವದಲ್ಲಿ ಜನ್ಮಾಂತರಗಳನ್ನು ಕಂಡಿಲ್ಲದ ಕಾರಣ.. ಆದ್ದರಿಂದ ವೈದಿಕ ಸಂಪ್ರದಾಯವು "ಯುಕ್ತಿ" (ಇಂಡಕ್ಟಿವ್ / ಡಿಡಕ್ಟಿವ್ ಲಾಜಿಕ್) ಅನ್ನು ಜನ್ಮಾಂತರದ ಪ್ರತಿಪಾದನೆಯನ್ನು ವಿವೇಚಿಸಲು ಸೂಚಿಸುತ್ತದೆ.

ವೈದಿಕ ಸಂಪ್ರದಾಯದಲ್ಲಿನ ಗ್ರಂಥಗಳ ತಿಳುವಳಿಕೆಯನ್ನು ಮತ್ತು ತಾರ್ಕಿಕ ಚಿಂತನೆಯನ್ನು ಧ್ಯಾನದಲ್ಲಿ ಅಳವಡಿಸಿಕೊಳ್ಳಬೇಕು - ಇದರಿಂದ ಸಾವಿನ ಭಯವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. 

ವೇದಿಕ್ ಟ್ರೈಬ್ ಗೆ "ಯೋಗ ದರ್ಶನದ ಪ್ರಕಾರ ದುಃಖಕ್ಕೆ ಐದು ಕಾರಣಗಳು" ಎಂಬ ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತಂದಿದ್ದಕ್ಕೆ ಸಂತೋಷವಾಗಿದೆ.

ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ಒಳ್ಳೆಯದಾಗಲಿ

ಮಧ್ವೇಶ ಕೆ
ವೇದಿಕ್ ಟ್ರೈಬ್




No comments:

Post a Comment