Six meditation techniques directly from Yoga Sutras - for beginners

Tuesday, November 21, 2023

ಋಗ್ವೇದದಲ್ಲಿ ಮೂರು ಪ್ರಮುಖ ದೈವೀ ಸ್ತ್ರೀತ್ವ

ಋಗ್ವೇದದಲ್ಲಿ ಮೂರು ಪ್ರಮುಖ ದೈವೀ ಸ್ತ್ರೀತ್ವ

ಪರಿಚಯ

ವೈದಿಕ ಸಂಪ್ರದಾಯದಲ್ಲಿ, ದೈವೀ ಜೀವಗಳನ್ನು "ದೇವ / ದೇವಿ" ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಯಾವಾಗಲೂ ಜೋಡಿಯಾಗಿಯೇ ಪೂಜಿಸಲಾಗುತ್ತದೆ. ದೈವತ್ವದ ಪುಂಸ್ತ್ವ ಮತ್ತು ಸ್ತ್ರೀತ್ವ ಎರಡೂ ಅಂಶಗಳನ್ನು ಸೃಷ್ಟಿಯ ವ್ಯವಹಾರಗಳಲ್ಲಿ ಸಮಾನವಾಗಿ ಗಮನಿಸಲಾಗುತ್ತದೆ. ಭಾರತೀಯ ಸಮಾಜಗಳು, ವೈದಿಕ ಮತ್ತು ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣುವ ಇಂತಹ ಬಹುತ್ವದ ಆದರ್ಶಗಳನ್ನು ಸನಾತನವಾಗಿ ಅಳವಡಿಸಿಕೊಂಡಿವೆ.

ಕಾಲಾನಂತರದಲ್ಲಿ, ಭಾರತೀಯ ಸಮಾಜಗಳು ತುರ್ಕರು, ಮೊಘಲರು ಇತ್ಯಾದಿಗಳಿಂದ ಆಕ್ರಮಣಕ್ಕೊಳಗಾದವು. ಅದು ಅವರನ್ನು ರಕ್ಷಣಾತ್ಮಕ ಸಮಾಜವಾಗಿ ಪರಿವರ್ತಿಸಿತು ಮತ್ತು ಪುರುಷಪ್ರಧಾನ ವ್ಯವಸ್ಥೆಯು ಅದರ ಪರಿಣಾಮವಾಗಿ ಹೆಚ್ಚಾಗಿ ಬೆಳೆಯಿತು. ಇದರಿಂದ ಸಮಾಜವು ದೈವತ್ವದ ಪುಂಸ್ತ್ವ ಅಂಶದ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು ಮತ್ತು ಸ್ತ್ರೀತ್ವ ಅಂಶವು ಹಿಂದೆ ಬಿದ್ದಿತು. ಈ ಸಾಮಾಜಿಕ ವಿದ್ಯಮಾನವು ಆಕ್ರಮಣಕಾರರ ದುಷ್ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿತ್ತು. ಇದರ ಪರಿಣಾಮವಾಗಿ ಸಾಮಾಜಿಕ ನಿರೂಪಣೆಗಳಲ್ಲಿ ಮತ್ತು ನಂತರದ ಸಂಸ್ಕೃತ ಸಾಹಿತ್ಯದಲ್ಲಿ ಪುರುಷ ಪ್ರಾಧಾನ್ಯತೆ ಪ್ರಾಬಲ್ಯ ಸಾಧಿಸಿತು.

ಪಾಶ್ಚಿಮಾತ್ಯ ಶಿಕ್ಷಣದಲ್ಲಿ, ವೈದಿಕ ಸಂಪ್ರದಾಯವನ್ನೇ ಪುರುಷ ಪ್ರಾಧಾನ ಎಂದು ನೋಡಲಾಗುತ್ತದೆ ಮತ್ತು ಕೆಲವು ವಿದ್ವಾಂಸರು (ವೆಂಡಿ ಡೋನಿಗರ್ ನಂತಹವರು) ಮಹಿಳೆಯರ ಮೇಲೆ ವ್ಯವಸ್ಥಿತ ದಬ್ಬಾಳಿಕೆಯೇ ನಡೆಯಿತು ಎಂಬಂತೆ ಅದರ ತೀವ್ರ ಸ್ವರೂಪವನ್ನು ಸೂಚಿಸುತ್ತಾರೆ. ಆದರೆ ಈ ದೃಷ್ಟಿಕೋನವು ಆಕ್ರಮಣಕಾರರ ದೌರ್ಜನ್ಯಗಳಿಂದ ಉಂಟಾದ ಸಾಮಾಜಿಕ ವಿದ್ಯಮಾನವನ್ನು ಗಮನಿಸಿವುದೇ ಇಲ್ಲ. ದುಃಖಕರ ಸಂಗತಿ ಎಂದರೆ, ಈ ಕಲ್ಪನೆಯನ್ನು ಬಹುಪಾಲು ಭಾರತೀಯ ವಿದ್ವಾಂಸರು ಎರವಲು ಪಡೆದಿದ್ದಾರೆ ಮತ್ತು ಆದ್ದರಿಂದ, ಈ ದೃಷ್ಟಿಕೋನವು ಭಾರತೀಯ ಶಿಕ್ಷಣದಲ್ಲಿ ಇಂದು ಮುಖ್ಯವಾಹಿನಿಯಾಗಿಬಿಟ್ಟಿದೆ.

ಆದಾಗ್ಯೂ, ಪಾಶ್ಚಾತ್ಯ ಪೂರ್ವಾಗ್ರಹವಿಲ್ಲದೆ ವೈದಿಕ ಗ್ರಂಥಗಳನ್ನು ಮತ್ತು ಶಾಸ್ತ್ರೀಯ ಸಂಸ್ಕೃತ ಸಾಹಿತ್ಯವನ್ನು ಅಧ್ಯಯನ ಮಾಡಿದರೆ, ವೈದಿಕ ಸಂಪ್ರದಾಯದಲ್ಲಿ ಪುಂಸ್ತ್ವ ಮತ್ತು ಸ್ತ್ರೀತ್ವವು ಸಮಾನ ಪಾತ್ರವನ್ನು ವಹಿಸಿದೆ ಎಂದು ಅನಾಯಾಸವಾಗಿ ಕಂಡುಕೊಳ್ಳಬಹುದು.

ಸಂಪೂರ್ಣ ವೈದಿಕ ಸಂಪ್ರದಾಯಕ್ಕೆ ಕಳಶಪ್ರಾಯವಾಗಿರುವ ಋಗ್ವೇದವು ದೈವಿಕ ಸ್ತ್ರೀತ್ವದ ಆರಾಧನೆ ಸೇರಿದಂತೆ ಬಹುತ್ವದ ಆದರ್ಶಗಳ ಒಂದು ದೊಡ್ಡ ಶ್ರೇಣಿಯನ್ನೇ ಪ್ರದರ್ಶಿಸುತ್ತದೆ. 

"ವೇದಿಕ್ ಟ್ರೈಬ್"ಗೆ ಋಗ್ವೇದದಲ್ಲಿ ಮೂರು ಆಯ್ಕೆಮಾಡಿದ ದೈವೀ ಸ್ತ್ರೀತ್ವದ ಕುರಿತು ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ: ಲಕ್ಷ್ಮಿ (ವಿಷ್ಣುವಿನ ಒಡನಾಡಿ), ಸರಸ್ವತಿ (ವಿರಿಂಚಿಯ ಒಡನಾಡಿ) ಮತ್ತು ಭಾರತಿ (ಪ್ರಾಣನ ಒಡನಾಡಿ).

ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ಸಮಾಜದಲ್ಲಿ ಪ್ರಚಲಿತದಲ್ಲಿರುವ ತಪ್ಪು ದೃಷ್ಟಿಕೋನಗಳಿಂದ ಅದನ್ನು ರಕ್ಷಿಸಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ಒಳ್ಳೆಯದಾಗಲಿ!

ಮಧ್ವೇಶ ಕೆ
ವೇದಿಕ್ ಟ್ರೈಬ್

— 

1. ಲಕ್ಷ್ಮಿ

ಋಗ್ವೇದದಲ್ಲಿ, "ಲಕ್ಷ್ಮಿ" ಎಂಬ ಪದವನ್ನು ಮಂಗಳಕರ ಅದೃಷ್ಟವನ್ನು ಸೂಚಿಸಲು ಬಳಸಲಾಗುತ್ತದೆ (10.71.2). ಇದರ 10 ನೇ ಮಂಡಲದ 125 ನೇ ಸೂಕ್ತವನ್ನು "ಅಂಭ್ರಿಣಿ ಸೂಕ್ತ" ಎಂದು ಕರೆಯಲಾಗುತ್ತದೆ ಮತ್ತು ಸಂಪೂರ್ಣವಾಗಿ ಲಕ್ಷ್ಮೀದೇವಿಗೆ ಮೀಸಲಾಗಿದೆ (ಪೈಂಗೀಶೃತಿ ನೋಡಿ).

ವೈದಿಕ ಸಾಹಿತ್ಯದಲ್ಲಿ, ಲಕ್ಷ್ಮಿಯನ್ನು "ಶ್ರೀ" ಎಂದು ಕರೆಯಲಾಗುತ್ತದೆ ಮತ್ತು ಅರಬಿಂದೋ ಇದು ದೈವೀ ಸತ್ಯದ ಪ್ರಕಾಶವನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ. 

"ಶ್ರೀ ಸೂಕ್ತ", ಲಕ್ಷ್ಮೀದೇವಿಗೆ ಮೀಸಲಾದ ಮತ್ತೊಂದು ಸೂಕ್ತವು ಋಗ್ವೇದದ ಖಿಲ ಭಾಗವಾಗಿ ಕಂಡುಬರುತ್ತದೆ ಮತ್ತು ಆದ್ದರಿಂದ ಇದು ಪ್ರಮುಖ ಖಿಲಸೂಕ್ತಗಳಲ್ಲಿ ಒಂದಾಗಿದೆ. 

"ಸೌಭಾಗ್ಯ ಲಕ್ಷ್ಮೀ ಉಪನಿಷದ್" ಎಂಬುದು ಲಕ್ಷ್ಮೀದೇವಿಗೆ ಮೀಸಲಾದ ಚಿಕ್ಕ ಉಪನಿಷತ್ತುಗಳಲ್ಲಿ ಒಂದಾಗಿದೆ ಮತ್ತು ಶ್ರೀ ಸೂಕ್ತದ ಋಷಿಗಳು ಮತ್ತು ಛಂದಸ್ ಅನ್ನು ಗುರುತಿಸುವ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ. 

"ಲಕ್ಷ್ಮೀ ತಂತ್ರ" ವೈಷ್ಣವ-ಆಗಮ ಗ್ರಂಥಗಳಲ್ಲಿ ಒಂದಾಗಿದೆ, ಇದು "ಲಕ್ಷ್ಮಿ" ಯನ್ನು ಆರಾಧಿಸುವ ವಿಧಾನಗಳನ್ನು ವಿಸ್ತಾರವಾಗಿ ವಿವರಿಸುತ್ತದೆ.

ಶ್ರೀ ವೈಷ್ಣವ ಸಂಪ್ರದಾಯದಲ್ಲಿ, ಏಕೈಕ ಸ್ತ್ರೀ ಆಳ್ವಾರ್ (ತಮಿಳು ಕವಿ ಸಂತ) - "ಆಂಡಾಳ್" ಅನ್ನು ಲಕ್ಷ್ಮೀದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಆಂಡಾಳ್ ರಚಿಸಿರುವ ತಿರುಪ್ಪಾವೈ ಮತ್ತು ನಾಚಿಯಾರ್ ತಿರುಮೊಳಿ ಈ ಸಂಪ್ರದಾಯದ ಪ್ರಮುಖ ಗ್ರಂಥಗಳಾಗಿವೆ.

ನೀವು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ ನೀವು ಜಿ ಆರ್ ನರಸಿಂಹನ್ ಅವರ "A Simple Guide to Mahalakshmi/ Lakshmi Devi Worship" ಓದಬಹುದು.

ಮುಂದಿನ ಬರಹದಲ್ಲಿ ನಾವು "ಸರಸ್ವತಿ" ದೇವಿಯ ಬಗ್ಗೆ ವಿಚಾರ ಹಂಚಿಕೊಳ್ಳುತ್ತೇವೆ.

ಮಧ್ವೇಶ ಕೆ
ವೇದಿಕ್ ಟ್ರೈಬ್


— 

2. ಸರಸ್ವತಿ 

ಋಗ್ವೇದದಲ್ಲಿ, "ಸರಸ್ವತಿ" ಎಂಬ ಪದವು ದೈವೀ ವಾಕ್ ಅನ್ನು ಸೂಚಿಸುತ್ತದೆ ಮತ್ತು ಪುರಾಣಗಳಲ್ಲಿ ಅವಳು ವಿರಿಂಚಿಯ (ಈ ಸೃಷ್ಟಿಯೊಳಗಿನ ಅತ್ಯಂತ ಪುರಾತನ ಜೀವದ) ಒಡನಾಡಿಯಾಗಿ ಕಾಣಿಸಿಕೊಳ್ಳುತ್ತಾಳೆ. ಋಗ್ವೇದದ 6ನೇ ಮಂಡದ 61ನೇ ಸೂಕ್ತವು ಸರಸ್ವತೀ ದೇವಿಗೆ ಮೀಸಲಾಗಿದೆ.

ಅರಬಿಂದೋ, "ಸರಸ್ವತಿ" ತತ್ವವು ಋತದಿಂದ ನಮಗೆ ಬರುವ ಸ್ಫೂರ್ತಿಯನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ (ಋತ ಎಂದರೆ ಕ್ರಿಯಾತ್ಮಕವಾಗಿರುವ ಸತ್ಯ) (ಋಗ್ವೇದದ 10ನೇ ಮಂಡಲದಲ್ಲಿ 110ನೇ ಸೂಕ್ತವನ್ನು ನೋಡಿ). ಕೃಷ್ಣ-ಯಜುರ್ವೇದದ ತೈತ್ತಿರೀಯ ಬ್ರಾಹ್ಮಣವು "ಮಾತು ಮತ್ತು ಸಂಗೀತದೊಂದಿಗೆ" ಸರಸ್ವತೀ ದೇವಿಯನ್ನು ಗುರುತಿಸುತ್ತದೆ. ಮಹಾಭಾರತವು ಸರಸ್ವತೀ ದೇವಿಯನ್ನು ವಿಶ್ವದ ಆದಿಸ್ವರೂಪದ ಸ್ವರಮೇಳದ ದೇವತೆ ಎಂದು ಕರೆಯುತ್ತದೆ.

"ದೇವಿ ಉಪನಿಷತ್ತು" ಸರಸ್ವತಿಯನ್ನು "ದೇವಿ / ಶಕ್ತಿ" ಯ ಪ್ರಮುಖ ರೂಪಗಳಲ್ಲಿ ಒಂದಾಗಿ ಪ್ರಸ್ತುತಪಡಿಸುತ್ತದೆ.

"ಸರಸ್ವತಿ" ವೈದಿಕ ಸಾಹಿತ್ಯದಲ್ಲಿ "ಇಳಾ-ಸರಸ್ವತಿ-ಭಾರತಿ", "ಲಕ್ಷ್ಮಿ-ಸರಸ್ವತಿ-ಪಾರ್ವತಿ", "ಮಹಾಲಕ್ಷ್ಮಿ-ಸರಸ್ವತಿ-ಮಹಾಕಾಳಿ" ಇತ್ಯಾದಿಯಾಗಿ ಅನೇಕ ತ್ರಿಮೂರ್ತಿಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. 

ಭರತಖಂಡದ ಪ್ರಾಚೀನ ನದಿ "ಸರಸ್ವತಿ"- ವೈದಿಕ ಸಾಹಿತ್ಯದಲ್ಲಿ ಪ್ರಬಲವಾದ ಸ್ಥಾನ ಹೊಂದಿದೆ ಮತ್ತು ವೇದಗಳ ಕಾಲಘಟ್ಟವನ್ನು ಕಂಡುಕೊಳ್ಳಲು ವಿದ್ವಾಂಸರು ಇದನ್ನು ಹೆಚ್ಚು ಅವಲಂಬಿಸುತ್ತಾರೆ. ಇದು ಭಾರತೀಯ ಹರಪ್ಪನ್ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿ ಎಂದು ಗುರುತಿಸುವಲ್ಲಿ ಪ್ರಮುಖವಾಗಿದೆ. ಆ ಮೂಲಕ ಕುಖ್ಯಾತ ಆರ್ಯರ ಆಕ್ರಮಣ / ವಲಸೆ ಸಿದ್ಧಾಂತವನ್ನು ನಿರಾಕರಿಸಲು ಸಹಕಾರಿ ಆಗಿದೆ. (ಆರ್ಯರ ಆಕ್ರಮಣ / ವಲಸೆಯ ಸಿದ್ಧಾಂತವು, ವೈದಿಕ ಜನರು ಭರತಖಂಡದ ಮೇಲೆ ಆಕ್ರಮಣ ಮಾಡಿದರು / ವಲಸೆ ಬಂದರು ಎಂದು ಪ್ರತಿಪಾದಿಸುತ್ತದೆ).

ನೀವು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ಜರ್ನಲ್‌ನಲ್ಲಿ ಶ್ರೀ ಅಶೋಕ್ ಮುಖರ್ಜಿ ಅವರು ಪ್ರಕಟಿಸಿದ "Rigvedic Saraswati: Myth and Reality" ಎಂಬ ಲೇಖನವನ್ನು ನೀವು ಓದಬಹುದು. (Vol.9, No.1, January 2001).

ಮುಂದಿನ ಬರಹದಲ್ಲಿ ನಾವು "ಭಾರತಿ" ದೇವಿಯ ಬಗ್ಗೆ ವಿಚಾರ ಹಂಚಿಕೊಳ್ಳುತ್ತೇವೆ.


ಮಧ್ವೇಶ ಕೆ
ವೇದಿಕ್ ಟ್ರೈಬ್


— 

3. ಭಾರತಿ

ಸಂಸ್ಕೃತದಲ್ಲಿ "ಭಾರತಿ" ಎಂಬ ಪದವು ದೈವೀ ಆನಂದದಲ್ಲಿ ಇರುವ ತಲ್ಲೀನತೆಯನ್ನು ಸೂಚಿಸುತ್ತದೆ ಮತ್ತು ಈ ದೇವಿಯು ಋಗ್ವೇದದಲ್ಲಿ, "ಇಳಾ-ಸರಸ್ವತಿ-ಭಾರತಿ" ಎಂಬ ತ್ರಿಮೂರ್ತಿಗಳಲ್ಲಿ ಎದ್ದುತೋರುತ್ತಾಳೆ.

ವೈದಿಕ ಸಾಹಿತ್ಯದಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ಇಬ್ಬರನ್ನೂ "ಭಾರತಿ" ಎಂದು ಕರೆಯಲಾಗಿದ್ದರೂ, ದೈವೀ ಮೀಮಾಂಸೆಯಲ್ಲಿ "ಭಾರತಿ" ದೇವಿಯು ಪ್ರಾಣನ ಒಡನಾಡಿ. (ಪ್ರಾಣ ಎಂದರೆ ಈ ಸೃಷ್ಟಿಯಲ್ಲಿಯ ಅತ್ಯುತ್ತಮ ಜೀವ).

ಶ್ರೀ ಮಧ್ವಾಚಾರ್ಯರು ತಮ್ಮ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ (ನಾರದ ಪುರಾಣ ಮತ್ತು ವಾಯು ಪುರಾಣವನ್ನು ಆಧರಿಸಿ) "ದ್ರೌಪದಿ"ಯು ಸ್ತ್ರೀ ದೇವತೆಗಳ ಅಭಿವ್ಯಕ್ತಿ ಎಂದು ಸ್ಪಷ್ಟಪಡಿಸಿದ್ದಾರೆ: ಭಾರತಿ (ಪ್ರಾಣನ ಒಡನಾಡಿ), ಶ್ಯಾಮಲಾ (ಧರ್ಮನ ಒಡನಾಡಿ), ಶಚಿ (ಇಂದ್ರನ ಒಡನಾಡಿ) ಮತ್ತು ಉಷಾ (ಅಶ್ವಿನ್ನರ ಒಡನಾಡಿ).

ಶ್ರೀ ಮಧ್ವಾಚಾರ್ಯರ ಸಂಪ್ರದಾಯದಲ್ಲಿ, ಭಾರತಿ ದೇವಿಯ ಪ್ರಾರ್ಥನೆಯು ದೈನಂದಿನ ಪೂಜೆಯ ಅತ್ಯಗತ್ಯ ಭಾಗವಾಗಿದೆ.

ಸಮಕಾಲೀನ ಸಿದ್ಧಾಂತದಲ್ಲಿ, ಭಾರತ-ಮಾತೆಯನ್ನು ಭಾರತಿ ದೇವಿಯೊಂದಿಗೆ ಕೂಡಾ ಸಮೀಕರಣ ಮಾಡಲಾಗುತ್ತದೆ. 

ನೀವು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ನೀವು R.U.S ಪ್ರಸಾದ್ ಅವರಿಂದ "River and Goddess worship in India" ಎಂಬ ಪುಸ್ತಕ ಓದಬಹುದು.

ಋಗ್ವೇದದಲ್ಲಿ ಮೂರು ಆಯ್ಕೆಮಾಡಿದ ದೈವೀ ಸ್ತ್ರೀತ್ವದ ಕುರಿತು ಈ ಪರಿಚಯಾತ್ಮಕ ಸರಣಿಯನ್ನು ನಿಮಗೆ ತಂದಿರುವುದಕ್ಕೆ ವೇದಿಕ್ ಟ್ರೈಬ್ ಗೆ ಸಂತೋಷವಾಗಿದೆ.


ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ನಿಮ್ಮಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುವುದು ಮತ್ತು ಸಮಾಜದಲ್ಲಿ ಪ್ರಚಲಿತದಲ್ಲಿರುವ ತಪ್ಪು ದೃಷ್ಟಿಕೋನಗಳಿಂದ ಅದನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ.

ಒಳ್ಳೆಯದಾಗಲಿ!

ಮಧ್ವೇಶ ಕೆ
ವೇದಿಕ್ ಟ್ರೈಬ್



No comments:

Post a Comment